ಮಕ್ಕಳು ಉದ್ಯೋಗ ದೊರೆಯುತ್ತದೆ ಎಂಬ ಭಾವನೆಯಿಂದ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ಶೈಕ್ಷಣಿಕ ಜ್ಞಾನ ವೃದ್ಧಿ, ಜೀವನದಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳವ ಶಿಕ್ಷಣ ಪಡೆಯುವಂತಾಗಬೇಕು. ಪ್ರಸ್ತುತ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಅನಿವಾರ್ಯ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಮಕ್ಕಳಿಗೆ ಪೂರ್ವಿಕರು ಅಳವಡಿಸಿಕೊಂಡಿದ್ದ ಜೀವನ, ನಮ್ಮ ಸಂಸ್ಕೃತಿ, ಭಾಂದವ್ಯ ವೃದ್ಧಿಸುವಂತಹ ಶಿಕ್ಷಣ ನೀಡಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಪಟ್ಟಣದ ಪಿಇಎಸ್ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಸಂಜೆ ನಡೆದ ವಿಜ್ಞಾನ ಕಟ್ಟಡ ಲೋಕಾರ್ಪಣೆ, ಪಿಇಎಸ್ ಪಬ್ಲಿಕ್ ಶಾಲೆ ಉದ್ಘಾಟನೆ, ಕಂಪ್ಯೂಟರ್ ಕೊಠಡಿ ಹಾಗೂ ಮನ್ಮುಲ್ ಒಕ್ಕೂಟದ ಮಕ್ಕಳಿಗಾಗಿ ನಿರ್ಮಿಸಿರುವ ನಂದಿನಿ ಮಿಲ್ಕ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಉದ್ಯೋಗ ದೊರೆಯುತ್ತದೆ ಎಂಬ ಭಾವನೆಯಿಂದ ವಿದ್ಯಾಭ್ಯಾಸ ಕೊಡಿಸುವ ಜೊತೆಗೆ ಶೈಕ್ಷಣಿಕ ಜ್ಞಾನ ವೃದ್ಧಿ, ಜೀವನದಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳವ ಶಿಕ್ಷಣ ಪಡೆಯುವಂತಾಗಬೇಕು. ಪ್ರಸ್ತುತ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಅನಿವಾರ್ಯ. ಶಾಲೆಗಳಲ್ಲಿ ಕನಿಷ್ಠ ವಾರದಲ್ಲಿ ಒಂದು ದಿನ ನೀಟ್ ಸಂಬಂಧಿಸಿದ ತರಗತಿ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಚಿಕ್ಕಂದಿನಿಂದಲೆ ನೀಟ್ ಪರೀಕ್ಷೆಯ ಜ್ಞಾನ ವೃದ್ಧಿಸಬೇಕು ಎಂದು ಸಲಹೆ ನೀಡಿದರು.ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊತ್ತುಕೊಟ್ಟು ಕೆಲಸ ಮಾಡಿದ್ದೇನೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕೇವಲ 169 ಪ್ರಥಮ ದರ್ಜೆ ಕಾಲೇಜುಗಳಿದ್ದವು. ನಾನು ಹೊಸದಾಗಿ 189 ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿದೆ ಎಂದರು.
1500ಕ್ಕೂ ಅಧಿಕ ಪ್ರೌಢಶಾಲೆಗಳು, 500ಕ್ಕೂ ಅಧಿಕ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಕೊಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದ್ದೇನೆ. 55 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೇನೆ. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿ ಎಲ್ ಕೆಜಿಯಿಂದ ಪಿಯುಸಿ ವರೆಗೂ ಮಕ್ಕಳು ಒಂದೇ ಸೂರಿನಡಿ ಕೆಲಸ ಮಾಡಲು ಕ್ರಮವಹಿಸಿದೆ ಎಂದರು.ವರ್ಷಕ್ಕೆ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಕ್ಕೆ ಕ್ರಮವಹಿಸಿದ್ದೆ. ಆದರೆ, ಈಗಿನ ಸರ್ಕಾರ ಎಷ್ಟು ಪಬ್ಲಿಕ್ ಶಾಲೆಗಳನ್ನು ಆರಂಭಿಸಿದೆ. ನನಗೆ ಐದು ವರ್ಷಗಳ ಕಾಲ ಅಧಿಕಾರ ದೊರೆತರೆ ಆರೋಗ್ಯ, ಶಿಕ್ಷಣ, ರೈತರ ಪ್ರಗತಿಗೆ ಶಾಶ್ವತವಾಗಿ ಪರಿಹಾರ ನೀಡುವ ಚಿಂತನೆ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಸರ್ಕಾರದ ಅನುದಾನಿತ ಶಾಲೆ ಅಧ್ಯಕ್ಷರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನಿಜಕ್ಕೂ ಸಂಸ್ಥೆಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. 3 ಕೋಟಿಗೂ ಅಧಿಕ ಹಣ ಖರ್ಚುಮಾಡಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಶೈಕ್ಷಣಿಕ ಸಹಕಾರಿಯಾಗಿದ್ದಾರೆ. ಮಕ್ಕಳಿಗೆ ಎಲ್ ಕೆಜಿಯಿಂದಲೂ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮೂಲ ಸೌಕರ್ಯ ಒದಗಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.ಸಂಸ್ಥೆ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ನಮ್ಮ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರು ಸೇರಿ ಚರ್ಚಿಸಿ ಶಾಲೆಯ ಕಟ್ಟಡಗಳು ಸೇರಿದಂತೆ ಹೈಟೆಕ್ ಮಾದರಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ ಎಂದರು.
ಓದಲು ಶಾಲೆಗೆ ಬರುವ ಮಕ್ಕಳಿಗೆ ಎಲ್ಲಾ ಸೌಕರ್ಯಗಳು ದೊರೆಯಬೇಕು ಎಂದು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಹೆಣ್ಣು ಮಕ್ಕಳ ಸಾಂಸ್ಕೃತಿಕ ಪ್ರಗತಿಗಾಗಿ ಶಾಲೆಯಲ್ಲಿ ದಿವಂಗತ ಚೆನ್ನಮ್ಮ ಅವರ ನೆನೆಪಿಗಾಗಿ ಅವರ ಹೆಸರಿನಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ಸಭಾಂಗಣ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಜೊತೆಗೆ ಮಕ್ಕಳು ಶೈಕ್ಷಣಿಕ ಪ್ರಗತಿಗಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 32 ಕಂಪ್ಯೂಟರ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ಲಾಘಿಸಿದರು.ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಯೇ ನಡೆಯಿತು. ನಮ್ಮ ಕ್ಷೇತ್ರಕ್ಕೂ 12 ಹೊಸ ಪ್ರೌಢಶಾಲೆ, 5 ಪದವಿ ಪೂರ್ವ ಕಾಲೇಜು ಹಾಗೂ 3 ಡಿಗ್ರಿ ಕಾಲೇಜುಗಳನ್ನು ಮಂಜೂರು ಮಾಡಿಕೊಡುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಇದೇ ವೇಳೆ ಶಾಲೆಯಲ್ಲಿ ಅಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಅಭಿನಂದಿಸಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸ್ಥೆ ಆಡಳಿತ ಮಂಡಳಿ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಸಿ.ಪಿ.ಶಿವರಾಜು, ಅಮೇರಿಕ ಮಹೇಶ್, ಆಡಳಿತ ಮಂಡಳಿ ಉಪಾಧ್ಯಕ್ಷ ಟಿ.ರಾಮಕೃಷ್ಣೇಗೌಡ, ಕಾರ್ಯದರ್ಶಿ ಕೆ.ವೈರಮುಡಿಗೌಡ, ನಿರ್ದೇಶಕರಾದ ಎನ್.ನಾರಾಯಣಗೌಡ, ಬಿ.ಕೆ.ಬಾಲಕೃಷ್ಣ, ಬಿ.ಕೆ.ನಟರಾಜು, ಎಚ್.ಮಂಜುನಾಥ್, ಕೆ.ಪುಟ್ಟೇಗೌಡ, ಡಾ.ಎಸ್.ಮುರುಳಿ, ಡಾ.ಎಚ್.ಆರ್.ತಿಮ್ಮೇಗೌಡ, ನಾರಾಯಣಗೌಡ, ಡಾ.ಎಂ.ಎನ್.ಶಿವಣ್ಣ, ಸಿ.ಜಿ.ಪ್ರಸನ್ನಕುಮಾರ್, ಸಿ.ಎಂ.ಶ್ರೀಕಾಂತ್, ಎಚ್.ಪಿ.ಸತೀಶ್, ಆಡಳಿತಾಧಿಕಾರಿ ಮಂಜುಳಾ ಸೇರಿದಂತೆ ಶಿಕ್ಷಕರು,ಸಿಬ್ಬಂದಿ ವರ್ಗದವರು ಹಾಜರಿದ್ದರು.