ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಸಂಯುಕ್ತ ಆಶ್ರಯದಲ್ಲಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಮಂಡಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಸಿಎಂಸಿಎ ಸಂಸ್ಥೆ ಬೆಂಗಳೂರು ಹಾಗೂ ನಾವು ಪ್ರತಿಷ್ಠಾನ ಕೊಡಗು ಸಂಯುಕ್ತ ಆಶ್ರಯದಲ್ಲಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಮಂಡಿಸಿದರು.ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿಯರಾದ ನಂದಿತಾ, ಹರ್ಷಿತ, ಡಿಂಪಲ್ ಸಭೆಯನ್ನು ನಡೆಸಿಕೊಟ್ಟರು. ತಮ್ಮ ಶಾಲೆಗೆ ಬೇಕಾದ ಬೇಡಿಕೆಗಳನ್ನು ಮಂಡಿಸಿದರು. ಶಾಲಾ ಆವರಣದಲ್ಲಿ ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಬಿದ್ದಿಹೋಗಿರುವ ಶಾಲೆಯ ಕಾಂಪೌಡ್ ಗೋಡೆಯನ್ನು ಪುನರ್ ನಿರ್ಮಾಣ ಮಾಡಬೇಕು. ಜೊತೆಗೆ, ಶೌಚಾಲಯದ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿ ಹಾಗೂ ಆಡಳಿತ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಮಳ್ತೆ ಶಾಲೆಯ ಮಕ್ಕಳು ಒತ್ತಾಯಿಸಿದರು. ನಮ್ಮ ಶಾಲೆಗೆ ಕಂಪ್ಯೂಟರ್ ಸೌಲಭ್ಯ ಒದಗಿಸಬೇಕು, ನಮಗೂ ಡಿಜಿಟಲ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು, ಶಾಲಾ ಶೌಚಾಲಯಗಳನ್ನು ಸ್ವಚ್ಛವಾಗಿ ನಿರ್ವಹಿಸಲು ಒಬ್ಬರು ಆಯಾ ನೇಮಿಸಬೇಕು ಎಂದು ವಿವಿಧ ಶಾಲೆಯ ವಿದ್ಯಾರ್ಥಿಗಳು ಮನವಿ ಮಾಡಿದರು.ಮಕ್ಕಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ಅಧ್ಯಕ್ಷರು ಮತ್ತು ಪಿಡಿಒ ನೀಡಿದರು. ಮಕ್ಕಳ ಗ್ರಾಮ ಸಭೆ ಮಕ್ಕಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಸಾಮಾಜಿಕ ಜಾಗೃತಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಗ್ರಾಮ ಸಭೆಯಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದ, ಸಿಆರ್‌ಪಿ ದೇವರಾಜೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್, ಪೊಲೀಸ್ ಇಲಾಖೆಯಿಂದ ಸಹದೇವ್ ಮತ್ತು ಸವಿತಾ, ದಾನಿಗಳಾದ ಪದ್ಮನಾಭ ಕಿರಗಂದೂರು, ನಾವು ಪ್ರತಿಷ್ಠಾನದ ಸುಮನ ಗೌತಮ್, ವನಿತಾ ಇದ್ದರು.