ಮಕ್ಕಳ ಹಕ್ಕು ಮತ್ತು ಸಮಸ್ಯೆ ಆಲಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಗೈರಾಗಿದ್ದರು.

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಶಾಲಾ ಮಕ್ಕಳ ಸಮಸ್ಯೆಗಳಿಗೆ ಧ್ವನಿಯಾಗಬೇಕಾದ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು, ಕುಷ್ಟಗಿ ತಾಲೂಕಿನಲ್ಲಿ ಕಾಟಾಚಾರಕ್ಕಾಗಿ, ಸರ್ಕಾರದ ಸುತ್ತೋಲೆಗೆ ಮಾತ್ರ ಸಭೆ ಮಾಡುತ್ತಿದ್ದು ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಪಾಲಕರು, ಶಿಕ್ಷಣ ಪ್ರೇಮಿಗಳು ಆರೋಪಿಸಿದ್ದಾರೆ.

ಇತ್ತೀಚಿಗೆ ತಾಲೂಕಿನ ತೊನಸಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೇಸೂರು ಗ್ರಾಪಂದಿಂದ ನಡೆದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯೇ ಇದಕ್ಕೆ ಸಾಕ್ಷಿಯಾಗಿದೆ.

ಕೇಸೂರು ಗ್ರಾಪಂ ವ್ಯಾಪ್ತಿಯ ತೊನಸಿಹಾಳದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಕೇಸೂರು ಗ್ರಾಪಂ ಸಿಬ್ಬಂದಿಗಳು, ಗ್ರಾಪಂ ಅಧ್ಯಕ್ಷರು ಹಾಗೂ ಕೆಲ ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕರು ಮಾತ್ರ ಇದ್ದರು. ಪ್ರಮುಖವಾಗಿ ಮಕ್ಕಳ ಹಕ್ಕು ಮತ್ತು ಸಮಸ್ಯೆ ಆಲಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಗೈರಾಗಿದ್ದರು.

ಸಭೆಗೆ ಆಹ್ವಾನವಿಲ್ಲ:ಮಕ್ಕಳ ಹಕ್ಕುಗಳ ಗ್ರಾಮಸಭೆಗೆ ಗೈರು ಹಾಜರಾಗಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರವೈಸರ್ ಭುವನೇಶ್ವರಿ ಸಂಕಾನಟ್ಟಿ ಅವರನ್ನು ವಿಚಾರಿಸಿದಾಗ ತೊನಸಿಹಾಳ ಗ್ರಾಮದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯ ಕುರಿತು ನಮಗೆ ಆಹ್ವಾನ ನೀಡಿಲ್ಲ, ಆಹ್ವಾನ ನೀಡಿದ್ದರೆ ಖಂಡಿತವಾಗಿ ಹೋಗುತ್ತಿದೆ ಎಂದು ತಿಳಿಸಿದ್ದಾರೆ.

ಬೆರಳೆಣಿಕೆಯಷ್ಟು ಮಕ್ಕಳು:ತೊನಸಿಹಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳನ್ನು ಹೊರತುಪಡಿಸಿ ಉಳಿದ ಕೇಸೂರು, ಗುಡಿ ಕಲಕೇರಿ, ಕಡೇಕೊಪ್ಪ, ನಡುವಲಕೊಪ್ಪ ಶಾಲೆಯ ಬೆರಳೆಣಿಕೆಯ ಮಕ್ಕಳನ್ನು ಮಾತ್ರ ಸಭೆಗೆ ಶಿಕ್ಷಕರು ಕರೆ ತಂದಿದ್ದರು.

ಸುತ್ತೋಲೆಗೆ ಮಾತ್ರ ಸೀಮಿತ:ಮಕ್ಕಳ ಹಕ್ಕುಗಳ ಗ್ರಾಮಸಭೆ ಆಯೋಜಿಸುವ ಮುಖ್ಯ ಉದ್ದೇಶ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಾದ ಬಾಲ್ಯ ವಿವಾಹ, ಬಾಲಕಾರ್ಮಿಕರು, ಶಿಕ್ಷಣದಿಂದ ದೂರ ಉಳಿದಿರುವದು ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಹಾಗೂ ಶಾಲೆಯಲ್ಲಿ ಬೇಕಾಗಿರುವ ಕ್ರೀಡಾಂಗಣ, ಶೌಚಾಲಯ, ಕುಡಿಯುವ ನೀರು, ಶಾಲಾ ಕೊಠಡಿ ಸೇರಿದಂತೆ ಅನೇಕ ಮಕ್ಕಳ ಬೇಡಿಕೆಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಮಕ್ಕಳ ಗ್ರಾಮಸಭೆ ರೂಪದಲ್ಲಿ ಕಾರ್ಯಕ್ರಮ ರೂಪಿಸಿದ್ದು, ಈ ಸಭೆಗಳು ಕೇವಲ ಸುತ್ತೋಲೆಗೆ ಮಾತ್ರ ಸೀಮಿತವಾಗುತ್ತಿವೆ ಎನ್ನಬಹುದು.

ಮಕ್ಕಳ ಬೇಡಿಕೆಗಿಲ್ಲ ಒತ್ತು: ಕೆಲ ಗ್ರಾಪಂಗಳಲ್ಲಿ ಮಕ್ಕಳ ಗ್ರಾಮಸಭೆ ಮಾಡುವ ಮೂಲಕ ಮಕ್ಕಳ ಬೇಡಿಕೆ, ಸಮಸ್ಯೆಗಳ ಪಟ್ಟಿ ಪಡೆಯಲಾಗುತ್ತದೆ, ಕೆಲವು ಬೇಡಿಕೆಗಳು ಮಾತ್ರ ಈಡೇರುವುದು ಬಿಟ್ಟರೆ, ಉಳಿದಂತೆ ಬಹುತೇಕ ಬೇಡಿಕೆಗಳು ಪ್ರತಿ ವರ್ಷ ಕೇಳಿಬರುತ್ತಿದ್ದು, ಅನುಷ್ಠಾನಕ್ಕೆ ಇಲಾಖೆಯ ಅಧಿಕಾರಿಗಳು ಮುಂದಾಗಬೇಕಿದೆ.

ನಮ್ಮ ಗ್ರಾಪಂ ಸಿಬ್ಬಂದಿಗಳಿಗೆ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. ಈ ಕುರಿತು ಮಾಹಿತಿ ಪಡೆದುಕೊಳ್ಳುವೆ ಎಂದು ಕೇಸೂರು ಗ್ರಾಪಂ ಪಿಡಿಒ ಕೆ. ವಾಗೀಶ ತಿಳಿಸಿದ್ದಾರೆ.

ಕೇಸೂರು ಗ್ರಾಪಂ ವ್ಯಾಪ್ತಿಯ ತೊನಸಿಹಾಳದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು. ಪ್ರತಿ ಶಾಲೆಯಿಂದ ಮೂರ್ನಾಲ್ಕು ಮಕ್ಕಳು ಮಾತ್ರ ಭಾಗವಹಿಸಿದ್ದರು ಈ ಸಭೆ ಯಶಸ್ವಿಯಾಗಿಲ್ಲ, ಮತ್ತೊಮ್ಮೆ ಸಭೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ಪಾಲಕರಾದ ಮಂಜೂರು ಇಲಾಹಿ ತಿಳಿಸಿದ್ದಾರೆ.