ಸಾರಾಂಶ
ಪ್ರತಿ ವರ್ಷ ನ.14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಒಳ್ಳೆಯ ಪುಸ್ತಕಗಳನ್ನು ಓದಿದರೆ ಜ್ಞಾನ ವೃದ್ಧಿಯಾಗಲಿದೆ. ತಾವು ಓದಿ, ಮನೆಯವರನ್ನು ಓದುವಂತೆ ಪ್ರೇರೇಪಿಸಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಓದುವ ಹಾಗೂ ಬರೆಯುವ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ಆತಂಕದ ವಿಚಾರ ಎಂದು ಮುಖ್ಯ ಶಿಕ್ಷಕ ಕೃಷ್ಣಪ್ಪ ಹೇಳಿದರು.ತಾಲೂಕಿನ ನೆಲಮನೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ ತರಗತಿ ಆವರಣದಲ್ಲಿ ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಒಳ್ಳೆಯ ಪುಸ್ತಕಗಳನ್ನು ಓದಿದರೆ ಜ್ಞಾನ ವೃದ್ಧಿಯಾಗಲಿದೆ. ತಾವು ಓದಿ, ಮನೆಯವರನ್ನು ಓದುವಂತೆ ಪ್ರೇರೇಪಿಸಿ ಎಂದರು.ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮಾತನಾಡಿ, ಪ್ರತಿ ವರ್ಷ ನ.14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ. ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಲಭ್ಯವಿರುವ ಅಮೂಲ್ಯ ಗ್ರಂಥ ಬಂಡಾರಗಳನ್ನು ಪ್ರದರ್ಶಿಸಿ, ಓದುಗರನ್ನು ಗ್ರಂಥಾಲಯಕ್ಕೆ ಆಕರ್ಷಣೆ ಮಾಡುವುದು ಹಾಗೂ ಸದಸ್ಯತ್ವ ನೋಂದಾವಣೆ ಮಾಡಿ ಪುಸ್ತಕ ಓದುವ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಬೆಳೆಸುವುದು ಮೂಲ ಉದ್ದೇಶವಾಗಿದೆ ಎಂದರು.
ಈ ವೇಳೆ ಸಹ ಶಿಕ್ಷಕರಾದ ಶ್ರೀನಿವಾಸಚಾರಿ, ಲಕ್ಷ್ಮಿ, ಸಾಗರ್, ಸವಿತ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.