ಮಕ್ಕಳ ವಿಜ್ಞಾನ ಸಮಾವೇಶ: ವೈಜ್ಞಾನಿಕ ಪ್ರಬಂಧ ಮಂಡನೆ

| Published : Dec 23 2023, 01:45 AM IST / Updated: Dec 23 2023, 01:46 AM IST

ಮಕ್ಕಳ ವಿಜ್ಞಾನ ಸಮಾವೇಶ: ವೈಜ್ಞಾನಿಕ ಪ್ರಬಂಧ ಮಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ಕೇಂದ್ರ ವಿಷಯದಡಿ ವಿವಿದ ಉಪ ವಿಷಯಗಳ ಕುರಿತು ವಿವಿಧ ಶಾಲೆಗಳಿಂದ ಆಗಮಿಸಿದ್ದ ಕಿರಿಯ ವಿಜ್ಞಾನಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ವಿಜ್ಞಾನಿಗಳ ಮಾದರಿಯಲ್ಲಿ ಮಂಡಿಸಿದರು

ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ನಗರದ ಕೊಡಗು ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: 2023 ವಿಜ್ಞಾನಾಸಕ್ತರ ಗಮನ ಸೆಳೆಯಿತು. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

‘ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ಕೇಂದ್ರ ವಿಷಯದಡಿ ವಿವಿದ ಉಪ ವಿಷಯಗಳ ಕುರಿತು ವಿವಿಧ ಶಾಲೆಗಳಿಂದ ಆಗಮಿಸಿದ್ದ ಕಿರಿಯ ವಿಜ್ಞಾನಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಯಾರಿಸಿದ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ವಿಜ್ಞಾನಿಗಳ ಮಾದರಿಯಲ್ಲಿ ಮಂಡಿಸಿದರು.

ಸಮಾವೇಶದ ಕೇಂದ್ರ ವಿಷಯದಡಿ ‘ನಿಮ್ಮ ಪರಿಸರ ವ್ಯವಸ್ಥೆಯನ್ನು ಅರಿಯಿರಿ, ಆರೋಗ್ಯ, ಪೋಷಣೆ ಮತ್ತು ಯೋಗಕ್ಷೇಮವನ್ನು ಬೆಳೆಸುವುದು, ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭ್ಯಾಸಗಳು, ಸ್ವಾವಲಂಬನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು ಹಾಗೂ ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ತಾಂತ್ರಿಕ ನಾವೀನ್ಯತೆ’ ಎಂಬ ಉಪ ವಿಷಯಗಳ ಕುರಿತು ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ತಂಡವು ವಿವಿಧ ಶೀರ್ಷಿಕೆಗಳಡಿ ತಯಾರಿಸಿದ್ದ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದರು.ವಿದ್ಯಾರ್ಥಿಗಳು ವಿಜ್ಞಾನಿಗಳ ಮಾದರಿಯಲ್ಲಿ ಮಂಡಿಸಿದ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡನೆಯು ಪ್ರೇಕ್ಷಕರನ್ನು ಬೆರಗುಗೊಳಿಸಿತು. ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ 24 ಮಂದಿ ಕಿರಿಯ ವಿಜ್ಞಾನಿಗಳು ತಮ್ಮ ಸುತ್ತಲಿನ ಪ್ರದೇಶದ ಸಮಸ್ಯೆಗಳನ್ನು ವಿವಿಧ ಉಪ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.

ಆರೋಗ್ಯ ಪಾಲನೆ, ವನ್ಯಜೀವಿಗಳು ಹಾಗೂ ಮಾನವ ಸಂಘರ್ಷಕ್ಕೆ ಕೊನೆ ಎಂದು? ಸೊಳ್ಳೆಗಳ ಚೆಲ್ಲಾಟ ಜನರಿಗೆ ಪ್ರಾಣ ಸಂಕಟ, ಕಲುಷಿತಗೊಳ್ಳುತ್ತಿರುವ ನದಿ ತೀರಗಳು, ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳೇ ಆಹಾರ, ಪರಿಸರ ವ್ಯವಸ್ಥೆಗಳು, ಕ್ಷೀಣಿಸುತ್ತಿರುವ ಜೇನು ಕೃಷಿ ಮತ್ತು ಪರಿಹಾರಗಳು, ಗುಬ್ಬಚ್ಚಿಗಳೇ ಎಲ್ಲಿದ್ದೀರಾ?, ಕ್ಷೀಣಿಸುತ್ತಿರುವ ಏಡಿಗಳು-ಪರಿಸರ ವ್ಯವಸ್ಥೆಗೆ ಮಾರಕ ಎಂಬಿತ್ಯಾದಿ ಉಪ ವಿಷಯಗಳ ಕುರಿತು ಕಿರಿಯ ವಿಜ್ಞಾನಿಗಳು ಭಿತ್ತಿಪತ್ರಗಳು ಹಾಗೂ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಆರೋಗ್ಯ ಮತ್ತು ನೈರ್ಮಲ್ಯ, ಆರೋಗ್ಯ ಸಂರಕ್ಷಣೆ, ತ್ಯಾಜ್ಯಗಳ ನಿರ್ವಹಣೆ, ಕಾಡಾನೆ ಮತ್ತು ಮಾನವನ ಸಂಘರ್ಷ, ಜಲ ಸಂರಕ್ಷಣೆ, ಜೀವಿ- ವೈವಿಧ್ಯ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ-ಪರಿಸರ ಸಂರಕ್ಷಿಸಿ, ಆರೋಗ್ಯ ರಕ್ಷಣೆ, ಪರಿಸರ ವ್ಯವಸ್ಥೆಯಲ್ಲಿ ಜೇನಿನ ಪಾತ್ರ, ಸಂಸ್ಕೃತಿ ಸ್ವಾಸ್ಥ್ಯ ಹಾಗೂ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯಡಿ ಆಹಾರ ಸಂರಕ್ಷಕಗಳ ಪ್ರಭಾವ ಮತ್ತಿತರ ಉಪ ವಿಷಯಗಳ ಕುರಿತು ವಿದ್ಯಾರ್ಥಿಗಳು ಮಂಡಿಸಿದ ವೈಜ್ಞಾನಿಕ ಪ್ರಬಂಧಗಳು ಗಮನ ಸೆಳೆದವು.

ವಿಜ್ಞಾನ ಸಮಾವೇಶದ ಮಹತ್ವ ಕುರಿತು ಮಾಹಿತಿ ನೀಡಿದ ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್, ಈ ಸಮಾವೇಶವು ಭವಿಷ್ಯದಲ್ಲಿ ಮಕ್ಕಳು ವಿಜ್ಞಾನಿಗಳಾಗಿ ರೂಪುಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸುತ್ತದೆ ಎಂದು ತಿಳಿಸಿದರು.

ಕೊಡಗು ವಿದ್ಯಾಲಯದ ಪ್ರಾಂಶುಪಾಲ ಕೆ.ಎಸ್.ಸುಮಿತ್ರ ಮಾತನಾಡಿ, ಮಕ್ಕಳು ಎಳೆಯ ವಯಸ್ಸಿನಲ್ಲೇ ಇಂತಹ ಸಮಾವೇಶಗಳಲ್ಲಿ ಭಾಗವಹಿಸುವುದರಿಂದ ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ರೂಪುಗೊಳ್ಳಲು ಸಹಕಾರಿ ಎಂದರು.

ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುವ ಮೊದಲ 10 ತಂಡಗಳು ನಂತರ ಜನವರಿ 2024 ರ ಮೊದಲ ವಾರದಲ್ಲಿ ಕೊಪ್ಪಳ ನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪ್ರಬಂಧ ಮಂಡಿಸಲಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದರು.

ಸಮಾವೇಶವನ್ನು ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಂವಹನ ಮಂಡಳಿ(ಎನ್.ಸಿ.ಎಸ್.ಟಿ.ಸಿ.), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ-ಸ್ಟೆಪ್ಸ್ ), ಮಡಿಕೇರಿ ನಗರದ ಕೊಡಗು ವಿದ್ಯಾಲಯದ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಸಂಘಟಿಸಲಾಗಿತ್ತು.