ತಾಲೂಕಿನ ಕೋಟಖಂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರುಕೇರಿ ಗ್ರಾಪಂನಿಂದ ಮಕ್ಕಳ ಗ್ರಾಮಸಭೆ ನಡೆಸಿ, ಮಕ್ಕಳ ಸಮಸ್ಯೆ ಆಲಿಸಲಾಯಿತು.

ಮಾರುಕೇರಿ ಗ್ರಾಪಂ ವತಿಯಿಂದ ಮಕ್ಕಳ ಗ್ರಾಮಸಭೆ

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಕೋಟಖಂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾರುಕೇರಿ ಗ್ರಾಪಂನಿಂದ ಮಕ್ಕಳ ಗ್ರಾಮಸಭೆ ನಡೆಸಿ, ಮಕ್ಕಳ ಸಮಸ್ಯೆ ಆಲಿಸಲಾಯಿತು.

ಸಭೆಯಲ್ಲಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಶಾಲೆ ಮತ್ತು ವಾರ್ಡ್ ಮಟ್ಟದ ಸಮಸ್ಯೆಗಳು, ಅಗತ್ಯಗಳು ಮತ್ತು ಸಲಹೆಗಳನ್ನು ಮಂಡಿಸಿದರು. ಮಕ್ಕಳೇ ಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಾಗಿ ಕಾರ್ಯನಿರ್ವಹಿಸಿ ನಾಯಕತ್ವ ಪ್ರದರ್ಶಿಸಿದರು.

ಪಿಡಿಒ ಉದಯ ಬೋರ್ಕರ್ ಮಾತನಾಡಿ, ಮಕ್ಕಳಸ್ನೇಹಿ ಗ್ರಾಪಂ ಅಭಿಯಾನದಲ್ಲಿ ಕೈಗೊಳ್ಳಲಾದ ಚಟುವಟಿಕೆ ಕುರಿತು ವಿವರಿಸಲು ‘ಮಕ್ಕಳ ದನಿ ಪೆಟ್ಟಿಗೆ’ ತೆರೆಯಲಾಗಿದ್ದು, ಮಕ್ಕಳಿಂದ ಬಂದ ಮನವಿಗಳು ಮತ್ತು ಪ್ರಶ್ನೆಗಳ ಕುರಿತು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದರು.

ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆ, ಸೈಬರ್ ಅಪರಾಧ ಮತ್ತು ಮೊಬೈಲ್ ಸುರಕ್ಷತೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಜಾಗೃತಿ ಮೂಡಿಸಿದರು. ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಕಾಳಜಿ ಕುರಿತು ವೈದ್ಯಾಧಿಕಾರಿ ಮಹತ್ವದ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ ಮಾತನಾಡಿ, ಮಕ್ಕಳ ಗ್ರಾಮಸಭೆಯಿಂದ ಮಕ್ಕಳ ಸಮಸ್ಯೆಗಳನ್ನು ತಿಳಿಯಲು ಸಹಾಯವಾಗಿದೆ. ಮಕ್ಕಳಿಂದ ಬಂದ ಎಲ್ಲ ಸಮಸ್ಯೆಗಳನ್ನು ಕ್ರೋಡೀಕರಿಸಿ ಆದ್ಯತೆಯ ಮೇರೆಗೆ ಪರಿಹಾರ ಒದಗಿಸಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ ಮಾತನಾಡಿ, ಮಾರುಕೇರಿ ಗ್ರಾಪಂ ಮಕ್ಕಳಿಗೆ ವಿವಿಧ ಚಟುವಟಿಕೆ ಒದಗಿಸಲು ಸದಾ ಬದ್ಧವಾಗಿದೆ. ಮಕ್ಕಳ ಗ್ರಾಮಸಭೆಯಿಂದ ಜನಪ್ರತಿನಿಧಿಗಳಿಗೆ ಅವರ ಸಮಸ್ಯೆ ತಿಳಿಯಲು ಅನುಕೂಲವಾಗುತ್ತದೆ. ಮಕ್ಕಳ ಇಂತಹ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಸಮಸ್ಯೆ ಬಗ್ಗೆ ತಿಳಿಸಬೇಕು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಕ್ರೀಡಾ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.