ಶಿಗ್ಗಾಂವಿ: ಮಕ್ಕಳು ಶಿಸ್ತು, ಸ್ವಪ್ರಯತ್ನ ಮತ್ತು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣವಂತರಾಗಬೇಕು. ಪೋಷಕರು ಪ್ರೀತಿಯಿಂದ ಮಾರ್ಗದರ್ಶನ ನೀಡಿ, ಅವರಲ್ಲಿ ಜವಾಬ್ದಾರಿ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಬೇಕು ಎಂದು ಹಾವೇರಿ ಶಾಸಕ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಹೇಳಿದರು.ತಾಲೂಕಿನ ಯತ್ತಿನಹಳ್ಳಿ ತಾಂಡಾದಲ್ಲಿ ಹಮ್ಮಿಕೊಂಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ, ಸಾಂಪ್ರದಾಯಿಕ ತಾಂಡಾ ಇದಾಗಿದ್ದು, ಶಿಗ್ಗಾಂವಿ ಇತಿಹಾಸ ನಿರ್ಮಿಸಿದ ಕ್ಷೇತ್ರವಾಗಿದೆ. ಕಳೆದ ಉಪಚುನಾವಣೆಯಲ್ಲಿ ಮಾತು ಕೊಟ್ಟಂತೆ ತಾಂಡಾಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ನಾನು ಸಹಿತ ಕಡಿಮೆ ಓದಿದರೂ ಸರಕಾರದ ಉಪಸಭಾಧ್ಯಕ್ಷನಾಗಿದ್ದೇನೆ, ಸೂರಗೊಂಡನಕೊಪ್ಪದಲ್ಲಿಯ ನನ್ನ ಶಿಕ್ಷಣ ಸಂಸ್ಥೆಯಲ್ಲಿ ೪ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಜೀವನದಲ್ಲಿ ಬಹಳಷ್ಟು ಮುಖ್ಯ, ಶಿಕ್ಷಣ ಮತ್ತು ಜ್ಞಾನಕ್ಕೆ ಬೆಲೆ ಇದೆ, ನಮ್ಮ ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ, ಸರಕಾರವೂ ಸಹಿತ ಶಿಕ್ಷಣಕ್ಕಾಗಿ ಪಣತೊಟ್ಟಿದೆ, ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಸರಕಾರದ ಸೌಲಭ್ಯ ಪಡೆಯುವ ಮೂಲಕ ಜೀವನ ನಿರ್ವಹಣೆ ಸಾಧ್ಯವಿದೆ ಎಂದರು. ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಮಾತನಾಡಿ, ಬಂಜಾರ ಸಮಾಜ ಶ್ರಮಿಕ ಸಮಾಜ, ರೈತನಿಗೂ ಬೆಲೆ ಬರುತ್ತದೆ, ನಮ್ಮ ಜೀವನ ನಿರ್ವಹಣೆಗೆ ಶಿಕ್ಷಣ ಅವಶ್ಯ, ಕೇವಲ ನೌಕರಿಗಾಗಿ ಶಿಕ್ಷಣ ಅವಶ್ಯವಲ್ಲ, ನಮ್ಮ ತಂದೆಯವರಿಂದ ನಾನೂ ಸಹಿತ ಕಾನೂನು ಶಿಕ್ಷಣ ಪಡೆಯಲು ಸಾದ್ಯವಾಯಿತು. ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಕೆಪಿಎಸ್‌ಸಿ ಶಾಲೆಗಳನ್ನು ತರಲಾಗಿದೆ. ಯಾರೂ ಸಹಿತ ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಮೊದಲನೆ ಹಂತವಾಗಿ ನನ್ನ ಕ್ಷೇತ್ರದಲ್ಲಿ ೬ ಸಾವಿರ ಹಾಗೂ ಯತ್ತಿನಹಳ್ಳಿ ತಾಂಡಾದಲ್ಲಿ ೪೦೦ ಪಟ್ಟಾಗಳನ್ನು ನೀಡಲಾಗಿದೆ ಎಂದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಅಕ್ಷರದ ಗೌಡ್ರು ಎಂದು ಕರೆಯಲಾಗುವ ಅರಟಾಳ ರುದ್ರಗೌಡ್ರ ಅವರ ಕ್ಷೇತ್ರವಿದು, ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಬಡತನ ಎಂಬ ದಾರಿದ್ರ್ಯವನ್ನು ದೂರ ಮಾಡಲು ಸಾಧ್ಯವಿದೆ, ವಿದ್ಯೆಗೆ ಮಹತ್ವ ಕೊಡಿ, ಜಾತಿಯಿಂದ ಯಾರೂ ಶ್ರೇಷ್ಠ ಮತ್ತು ಶ್ರೀಮಂತರಲ್ಲ ಎಂದರು.ಬಂಜಾರ ಗುರುಪೀಠದ ಶ್ರೀ ತಿಪ್ಪೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಯಾಸೀರ್ ಖಾನ್ ಪಠಾಣ್ ಅವರು ರಜತ ರತ್ನ ಹಸ್ತಪತ್ರಿಕೆ ಬಿಡುಗಡೆ ಮಾಡಿದರು. ಸೀಜನ್ ೧೧ರ ಬಿಗ್‌ಬಾಸ್ ವಿನ್ನರ್ ಹನುಮಂತ ಲಮಾಣಿ ಅವರು ಕಾರ್ಯಕ್ರಮದಲ್ಲಿ ಹಾಡಿದ ಹಾಡುಗಳು ಎಲ್ಲರ ಗಮನ ಸೆಳೆದವು. ಇದಕ್ಕೂ ಪೂರ್ವದಲ್ಲಿ ಶ್ರೀ ಸರಸ್ವತಿ ಪೂಜೆ ಹಾಗೂ ತಂದೆ-ತಾಯಂದಿಯರಿಗೆ ಪಾದಪೂಜೆಯನ್ನ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಎಸ್ ಎಫ್. ಮಣಕಟ್ಟಿ, ಗುಡ್ಡಪ್ಪ ಜಲದಿ, ನವೀನ ಪಾಟೀಲ, ಮೋಹನ್ ದಂಡಿನ, ಸಂಜೀವಕುಮಾರ ನೀರಲಗಿ, ಎನ್.ಎಂ. ಮೂದೂರ, ಶಂಕರಗೌಡ್ರ ಪಾಟೀಲ, ಹರ್ಜಪ್ಪ ಲಮಾಣಿ, ಅಣ್ಣಪ್ಪ ಲಮಾಣಿ, ರಾಜೇಶ್ವರಿ ಲಮಾಣಿ, ಭಾರತಿ ಛಬ್ಬಿ, ಸೋಮಶೇಖರ ನಾಯಕ್, ಮಂಜುನಾಥ ತಿಮ್ಮಾಪೂರ, ಬಾಬರ್ ಭೋವಾಜಿ, ಗೌಸಖಾನ್ ಮುನಶಿ, ಚಂದ್ರು ಹೆಬ್ಬಾಳ, ಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ಲಮಾಣಿ ಸೇರಿದಂತೆ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗೂ ಮಕ್ಕಳ ಪಾಲಕರು, ಶಿಕ್ಷಣ ಪ್ರೇಮಿಗಳು ಇದ್ದರು.ಮಕ್ಕಳು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣವಂತರಾಗಬೇಕು-ರುದ್ರಪ್ಪ ಲಮಾಣಿ
ಮಕ್ಕಳು ಶಿಸ್ತು, ಸ್ವಪ್ರಯತ್ನ ಮತ್ತು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣವಂತರಾಗಬೇಕು. ಪೋಷಕರು ಪ್ರೀತಿಯಿಂದ ಮಾರ್ಗದರ್ಶನ ನೀಡಿ, ಅವರಲ್ಲಿ ಜವಾಬ್ದಾರಿ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಬೇಕು ಎಂದು ಹಾವೇರಿ ಶಾಸಕ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.