ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು: ಎಂ.ಆರ್‌.ರವಿಶಂಕರ್‌

| Published : Jun 09 2024, 01:41 AM IST

ಸಾರಾಂಶ

ನರಸಿಂಹರಾಜಪುರ, ಈಗ ಸರ್ಕಾರಿ ಶಾಲೆಗಳು ಉತ್ತಮವಾಗಿ ನಡೆಯುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ದಾನಿ ಭಾಗ್ಯರಾಮ ಲೇಔಟ್ ಮಾಲೀಕ ಎಂ.ಆರ್.ರವಿಶಂಕರ್ ತಿಳಿಸಿದರು.

- ಕಲ್ಲುಗುಡ್ಡೆ ಸರ್ಕಾರಿ ಶಾಲೆಯ ಮಕ್ಕಳಿಗೆ ದಾನಿಗಳಿಂದ ಶಾಲಾ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಈಗ ಸರ್ಕಾರಿ ಶಾಲೆಗಳು ಉತ್ತಮವಾಗಿ ನಡೆಯುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ದಾನಿ ಭಾಗ್ಯರಾಮ ಲೇಔಟ್ ಮಾಲೀಕ ಎಂ.ಆರ್.ರವಿಶಂಕರ್ ತಿಳಿಸಿದರು.

ಕಲ್ಲು ಗುಡ್ಡೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 30 ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕ, ಪೆನ್ನು, ನೀರಿನ ಬಾಟಲ್ ಸೇರಿ ಶಾಲಾ ಕಿಟ್ ನ್ನು ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಿಟ್ ವಿತರಿಸಲಾಗುತ್ತಿದೆ. ಹಿಂದೆ ಶಾಸಕ ರಾಜೇಗೌಡ ಅವರ ಹುಟ್ಟು ಹಬ್ಬಕ್ಕೆಇದೇ ಶಾಲೆಗೆ 2 ಬಾರಿ ಶಾಲಾ ಕಿಟ್ ವಿತರಿಸಿದ್ದೇವೆ. ಈ ಬಾರಿ ಹೆಚ್ಚುವರಿಯಾಗಿ ಬ್ಯಾಗ್ ನೀಡಿದ್ದೇವೆ. ಮುಂದಿನ ವಾರದಲ್ಲಿ ಪವನ್ ಗ್ರೂಪ್ ನಿಂದ 2 ಸರ್ಕಾರಿ ಶಾಲೆ ಮಕ್ಕಳಿಗೆ ಶಾಲಾಕಿಟ್ ವಿತರಿಸಲಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ವೀರಪ್ರಸಾದ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ರೈನ್ ಕೋಟು, ನಲಿ-ಕಲಿ ವಿಭಾಗದಲ್ಲಿ ಮಕ್ಕಳಿಗೆ ಬೇಕಾದ ಪರಿಕರಗಳನ್ನು ವಿತರಿಸುತ್ತೇನೆ ಎಂದು ಭರವಸೆ ನೀಡಿದರು.ಶಾಲೆ ಮುಖ್ಯೋಪಾಧ್ಯಾಯಿನಿ ಮಂಗಳಮ್ಮ ಮಾತನಾಡಿ, ದಾನಿಗಳು ಸರ್ಕಾರಿ ಶಾಲೆ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿದರೆ ಮಕ್ಕಳಿಗೆ ಶಿಕ್ಷಣ ಕಲಿಯಲು ಇನ್ನಷ್ಟು ಸ್ಪೂರ್ತಿ ಬರಲಿದೆ. ನಮ್ಮ ಶಾಲೆಯಂತೆ ಉಳಿದ ಸರ್ಕಾರಿ ಶಾಲೆಗಳಿಗೂ ಸಹಾಯ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ದಾನಿಗಳಾದ ಗುಬ್ಬಿಗ ಸಂತೋಷ್, ಎನ್.ಎಂ.ಕಾರ್ತಿಕ್, ಶ್ರೀಧರ್ ಪಾನಿ, ಕಲ್ಲುಗುಡ್ಡೆ ಶರತ್, ಸುಲ್ತಾನ್, ಸಹ ಶಿಕ್ಷಕ ವೆಂಕಟೇಶ್ ಇದ್ದರು.