ಸಾರಾಂಶ
ಅಥಣಿ: ಚಿಕ್ಕ ಮಗು ಇರುವಾಗಲೇ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕು. ಶ್ರೀಕೃಷ್ಣನ ಆದರ್ಶವನ್ನು ಮಕ್ಕಳಿಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಮಕ್ಕಳ ಮನಸ್ಸು ಹೂವಿನ ಹಾಗೆ ಇರುತ್ತದೆ. ಚಿಕ್ಕ ಮಕ್ಕಳಿಗೆ ಯಾವುದೇ ವೇಷಭೂಷಣ ತೊಡಿಸಿದರೂ ಅಂದ ಚೆಂದವಾಗಿ ಕಾಣುತ್ತಾರೆ. ಹಿಂದಿನ ಇತಿಹಾಸ ತಿಳಿಸುವ ಪಾತ್ರಗಳು ಮಕ್ಕಳಿಗೆ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳು ಸಹಕಾರಿ, ಚಿಕ್ಕ ಮಗು ಇರುವಾಗಲೇ ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕು. ಶ್ರೀಕೃಷ್ಣನ ಆದರ್ಶವನ್ನು ಮಕ್ಕಳಿಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಹೇಳಿದರು.ಇಲ್ಲಿಯ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ರಾಧಾ ಕೃಷ್ಣ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಮಕ್ಕಳಲ್ಲಿ ನೈತಿಕತೆ ಕಾಣೆಯಾಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ದಾರಿ ತೋರುವಂತಾಗಬೇಕು. ಪರಸ್ಪರ ವಿಶ್ವಾಸ, ಪ್ರೀತಿಯಿಂದ ಇರುವಂತೆ ನೋಡಿಕೊಳ್ಳಬೇಕು. ಚಿಕ್ಕಮಕ್ಕಳ ಕೈಯಲ್ಲಿ ಪಾಲಕರು ಎಂದಿಗೂ ಮೊಬೈಲ್ ಕೊಡಬಾರದು. ಈ ಮೊಬೈಲ್ ಚಟಕ್ಕೆ ಅಂಟಿಕೊಂಡ ಮಕ್ಕಳಿಗೆ ಓದು ಬರಹದ ಕಡೆಗೆ ಒಲವು ಕಡಿಮೆಯಾಗುತ್ತದೆ. ಆದ್ದರಿಂದ ಪಾಲಕರು ಎಚ್ಚರಿಕೆ ವಹಿಸಬೇಕೆಂದರು.
ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಮಹಾಜನ ಮಾತನಾಡಿದರು. ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ಶ್ರೀಶೈಲ ಸಂಕ, ಸುನೀಲ ಶಿವಣಗಿ, ಓಂಕಾರೆಪ್ಪ ಸಾವಡಕರ ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಡಳಿತ ಅಧಿಕಾರಿ ಎಚ್.ಆರ್. ಗುಡೋಡಗಿ ಸ್ವಾಗತಿಸಿದರು. ಎಸ್.ಪಿ. ಪೀರಗೊಂಡ ನಿರೂಪಿಸಿದರು. ಪಿ.ಡಿ. ಚನಗೌಡರ ವಂದಿಸಿದರು.