- 1ರಿಂದ 19 ವರ್ಷದ ಮಕ್ಕಳಿಗೆ ಮಾತ್ರೆ ಕಡ್ಡಾಯ: ಡಾ. ಅಲಂ ಪಾಷಾ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಒಂದರಿಂದ ಹತ್ತೊಂಬತ್ತು ವರ್ಷದ ಪ್ರತಿಯೊಬ್ಬ ಮಕ್ಕಳು 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ‘ಆಲ್ಬೆಂಡಜೋ಼ಲ್’ ಮಾತ್ರೆ ಸೇವಿಸಬೇಕು’ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲಂ ಪಾಷಾ ಕರೆ ಕೊಟ್ಟರು.

ಪಟ್ಟಣದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆಯಲ್ಲಿ ಮಕ್ಕಳಿಗೆ ಜಂತು ಹುಳ ಮಾತ್ರೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿ, ‘ಪ್ರತಿಯೊಬ್ಬರಲ್ಲಿ ಜಂತು ಹುಳು ಇರುತ್ತದೆ. ಜಂತುಹುಳು ಮನುಷ್ಯನ ರಕ್ತ ಹೀರುತ್ತದೆ. ಹಾಗಾಗಿ ಮನುಷ್ಯರು ಅಪೌಷ್ಟಿಕತೆ ಮತ್ತು ರಕ್ತ ಹೀನತೆಯಿಂದ ಸದಾ ಬಳಲಿದಂತಿರಲಿದ್ದಾರೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ’ ಎಂದು ಎಚ್ಚರಿಸಿದರು.

‘ಶುದ್ಧ ನೀರನ್ನು ಕುಡಿಯಬೇಕು. ಆಹಾರವನ್ನು ಮುಚ್ಚಿಡಬೇಕು. ಹಣ್ಣು-ತರಕಾರಿಯನ್ನು ಶುದ್ಧ ನೀರಿಂದ ತೊಳೆಯಬೇಕು. ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಬರಿಗಾಲಿನಿಂದ ನಡೆಯಬೇಡಿ’ ಎಂದರು.


ಈ ಸಮಯದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಅಲೀಂ ಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸತೀಶ, ಮುಖ್ಯ ಶಿಕ್ಷಕ ಸಿದ್ದಾರ್ಥ್,ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಹಾಗೂ ಇತರರು ಇದ್ದರು.