ಸಾರಾಂಶ
ಹಾವಂಜೆಯ ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗಿದ್ದ ಬಾಲಲೀಲಾ ಚಿಣ್ಣರ ಬೇಸಿಗೆ ಶಿಬಿರವು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಹಾವಂಜೆಯ ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗಿದ್ದ ಬಾಲಲೀಲಾ ಚಿಣ್ಣರ ಬೇಸಿಗೆ ಶಿಬಿರವು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಮಾಪನಗೊಂಡಿತು.ಈ ಸಂದರ್ಭದಲ್ಲಿ ‘ಕಲಾ ಸಿಂಧು’ ಪುರಸ್ಕಾರವನ್ನು ವೀಣಾವಾದನ ಹಾಗೂ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸ್ವೀಕರಿಸಿದ ವಿದುಷಿ ಪವನಾ ಬಿ. ಆಚಾರ್ ಮಾತನಾಡಿ, ಕಲೆಯ ಬಗೆಗಿನ ಪಾರಂಪರಿಕ ಜ್ಞಾನವನ್ನು ಮಕ್ಕಳೆಲ್ಲ ಅರಿತಾಗ ಮಾತ್ರ ನಮ್ಮ ಶರೀರ ಮತ್ತು ಮನಸ್ಸು ನೆಮ್ಮದಿಯಿಂದಿರುತ್ತದೆ. ಕೇಳುವ ಮತ್ತು ನೋಡುವ ಹಸಿವನ್ನು ಚಿಣ್ಣರು ಬೆಳೆಸಿಕೊಳ್ಳಬೇಕು ಎಂಬುದಾಗಿ ನುಡಿದರು.
ಮುಖ್ಯ ಅತಿಥಿಗಳಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ, ತಾವು ನಡೆದು ಬಂದ ದಾರಿಯನ್ನು ಮಕ್ಕಳಿಗೆ ವಿವರಿಸುತ್ತ ಚಿಣ್ಣರ ಶಿಬಿರವು ಹೇಗೆ ಮಕ್ಕಳ ಬದುಕನ್ನು ಹಸನಾಗುವಂತೆ ರೂಪಿಸಬಲ್ಲುದು ಎಂಬುದಾಗಿ ವಿವರಿಸಿದರು.ಇನ್ನೋರ್ವ ಅತಿಥಿಗಳಾದ ಆನಂದ ಕಾರ್ನಾಡ್, ಸ್ವಚ್ಛಂದದ ಪರಿಸರದಲ್ಲಿ ಭಾವನಾ ಫೌಂಡೇಶನ್ ಸಂಘಟಿಸುತ್ತಿರುವ ಬೇಸಿಗೆ ಶಿಬಿರದಲ್ಲಿನ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಅಭಿಪ್ರಾಯವಿತ್ತರು.
ಇದೇ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ಭಾವನಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗುರು ಹಾವಂಜೆ ಮಂಜುನಾಥ ರಾವ್ ವಹಿಸಿದ್ದರು. ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಅಕ್ಷತಾ ವಿಶು ರಾವ್ ಸನ್ಮಾನಪತ್ರ ವಾಚಿಸಿದರು. ವಿಶು ರಾವ್ ಹಾವಂಜೆ ವಂದಿಸಿದರು.