ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅತ್ಯಗತ್ಯ. ಮಕ್ಕಳಿಗೆ ಸರಿಯಾದ ಶಿಕ್ಷಣ, ಆರೋಗ್ಯ, ಸಂರಕ್ಷಣೆ ಸಿಕ್ಕಾಗ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಆಶಯ । ಗುಡ್ಡದಹಟ್ಟಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆಗೆ ಚಾಲನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅತ್ಯಗತ್ಯ. ಮಕ್ಕಳಿಗೆ ಸರಿಯಾದ ಶಿಕ್ಷಣ, ಆರೋಗ್ಯ, ಸಂರಕ್ಷಣೆ ಸಿಕ್ಕಾಗ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗುಡ್ಡದಹಟ್ಟಿ ಗ್ರಾಮದಲ್ಲಿ ಸೋಮವಾರ ನೂತನ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು. ಮೂಲಸೌಕರ್ಯ ಹಾಗೂ ಸಾರಿಗೆ ಸೌಲಭ್ಯ ವಂಚಿತವಾಗಿದ್ದ ತಾಲೂಕಿನ ಗುಡ್ಡದಹಟ್ಟಿ ಗ್ರಾಮಕ್ಕೆ ಸರ್ಕಾರಿ ಬಸ್‌ ಸೇವೆ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡುತ್ತೇವೆ ಎಂದರು.

ಹಳೇ ವಿದ್ಯಾರ್ಥಿಗಳ ಸಹಕಾರ ಬೇಕು:

ಗ್ರಾಮೀಣ ಮಕ್ಕಳಿಗೆ ಸರಿಯಾದ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ, ಉತ್ತಮ ಆರೋಗ್ಯ ಸಿಗಬೇಕು. ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯಗಳ ಅಗತ್ಯವಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಅನೇಕರು ಇಂದು ಉನ್ನತ ಹುದ್ದೆ, ಸ್ಥಾನಮಾನಗಳಲ್ಲಿ ಇರುವುದು ಗಮನೀಯ. ಹಳೇ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಶಾಲಾಭಿವೃದ್ಧಿಗೆ ಶ್ರಮಿಸಬೇಕು. ಎಸ್‌ಡಿಎಂಸಿಯವರು ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ಮೂಲಕ ಆರ್ಥಿಕ ಸಹಕಾರ, ಸಲಹೆ ಪಡೆದು ತಮ್ಮ ಶಾಲೆ ಕೊಠಡಿ, ಶಾಲಾಭಿವೃದ್ದಿ ಮಾಡಬಹುದಾಗಿದೆ ಎಂದು ಸಲಹೆ ನೀಡಿದ ಅವರು, ಮಾಯಕೊಂಡ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ರಸ್ತೆ ನಿರ್ಮಾಣಕ್ಕೆ ₹8 ಕೋಟಿ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಗ್ರಾಮದಲ್ಲೀಗ ಹಬ್ಬದ ಸಂಭ್ರಮ:

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಗುಡ್ಡದಹಳ್ಳಿಯು ತಾಲೂಕಿನ ಕೊನೆಯ ಗಡಿ ಗ್ರಾಮ. ಇಲ್ಲಿಗೆ ಬಸ್ ಸಂಪರ್ಕವಿಲ್ಲದೇ ಜನರಿಗೆ ಸಾಕಷ್ಟು ಅನಾನುಕೂಲವಾಗಿತ್ತು. ಈಗ ಬಸ್ ಸೌಕರ್ಯ ಕಲ್ಪಿಸಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಭಾವಿಹಾಳ್ ಮಾರ್ಗವಾಗಿ ಗುಡ್ಡದಹಳ್ಳಿ, ನರಗನಹಳ್ಳಿ ಮೂಲಕ ದಾವಣಗೆರೆಗೆ ಗ್ರಾಮಸ್ಥರು ಪ್ರಯಾಣಿಸಬಹುದು. ಬಸ್ ಗ್ರಾಮಕ್ಕೆ ಬೆಳಗ್ಗೆ 8.45ಕ್ಕೆ ಬರಲಿದ್ದು, ಮಧ್ಯಾಹ್ನ 1.30ಕ್ಕೆ ದಾವಣಗೆರೆಯಿಂದ ಗ್ರಾಮಕ್ಕೆ ಮತ್ತು ಸಂಜೆ 4 ಗಂಟೆಗೆ ದಾವಣಗೆರೆಯಿಂದ ಭಾವಿಹಾಳ್ ಮಾರ್ಗವಾಗಿ ಗುಡ್ಡದಹಳ್ಳಿ ತಲುಪಲಿದೆ. ವಿದ್ಯಾರ್ಥಿಗಳು ಹಾಗೂ ತಾಯಂದಿರು ಮೊದಲನೆಯದಾಗಿ ಈ ಸೌಲಭ್ಯ ಪಡೆಯುವಂತಾಗಲಿ ಎಂದರು.

ಸ್ವಚ್ಛತೆ ಕಾಪಾಡಬೇಕು:

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಇಡೀ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ಹಾಕಿರುವ ಪ್ಲಾಸ್ಟಿಕ್ ತೆಗೆದು ಸ್ವಚ್ಛತೆ ಕಾಪಾಡಬೇಕು. ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಶಾಸಕರು, ಸಂಸದರು ಕಲ್ಪಿಸಲಿದ್ದು, ಗ್ರಾಮಸ್ಥರು ಸಹ ಗ್ರಾಮವನ್ನು ಸಂಪೂರ್ಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಸಿದ್ದೇಶ್ ಹೆಬ್ಬಾಳ, ತಹಸೀಲ್ದಾರ ಡಾ.ಅಶ್ವತ್ಥ್‌, ತಾಪಂ ಇಒ ರಾಮ ಭೋವಿ, ಗ್ರಾಪಂ ಅಧ್ಯಕ್ಷೆ ಆಶಾ ನಾಗರಾಜ, ಗ್ರಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

- - -

ಕೋಟ್‌ ಸರ್ಕಾರಿ ಶಾಲೆ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಹೊಂದಿ, ಉತ್ತಮ ಶಿಕ್ಷಕರಾಗಿರುವರು. ಶಿಕ್ಷಕರ ಮೂಲಕ ಜ್ಞಾನದ ಸದ್ಬಳಕೆಯಾಗಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಶಾಲೆಯ ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾತ್ರ ಬಹಳ ಮುಖ್ಯ

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

- - - -2ಕೆಡಿವಿಜಿ5:

ದಾವಣಗೆರೆ ತಾಲೂಕಿನ ಗುಡ್ಡದಹಳ್ಳಿ ಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್‌ ಸೇವೆಗೆ ಚಾಲನೆ ನೀಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ಶಾಸಕ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ ಇತರರು ಇದ್ದರು.