ಸಾರಾಂಶ
ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಪರಿಸರದ ಮಹತ್ವ ತಿಳಿಸಬೇಕು. ಜತೆಗೆ ಪರಿಸರ ಸಂರಕ್ಷಣೆ ಹಾಗೂ ಪರಿಸರ ಬೆಳೆಸಲು ಅವರಲ್ಲಿ ಪ್ರೇರೇಪಣೆ ಮೂಡಿಸಬೇಕು ಎಂದು ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದ ಪಾಲಕರ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಪರಿಸರದ ಮಹತ್ವ ತಿಳಿಸಬೇಕು. ಜತೆಗೆ ಪರಿಸರ ಸಂರಕ್ಷಣೆ ಹಾಗೂ ಪರಿಸರ ಬೆಳೆಸಲು ಅವರಲ್ಲಿ ಪ್ರೇರೇಪಣೆ ಮೂಡಿಸಬೇಕು ಎಂದು ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದ ಪಾಲಕರ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.ನಗರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಚಿನ ದಿನಗಳಲ್ಲಿ ಪರಿಸರದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಸಸಿ ನೆಟ್ಟು ಪೋಷಣೆ ಮಾಡುವುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಅಷ್ಟೇ ಅಲ್ಲ. ಪರಿಸರ ಸಂರಕ್ಷಣೆಗೆ ಸಮೂದಾಯದ ಸಹಿಭಾಗಿತ್ವ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಸರದ ಮಹತ್ವ, ಪರಿಸರ ಬೆಳೆಸುವ ಬಗ್ಗೆ ವಿಶೇಷ ಆಸಕ್ತಿ ಮೂಡಿಸಬೇಕು ಎಂದರು.
ಮುಂದೆ ಸಂಕಷ್ಟದ ದಿನ : ಪರಿಸರ ಮಾಲಿನ್ಯ ತಡೆಯುವ ಜತೆಗೆ ಉತ್ತಮ ಹಮಾವಾನ, ಮಳೆ ನಿಯಮಿತವಾಗಿ ಬರಲು ಅರಣ್ಯ ಪ್ರದೇಶ ಅತ್ಯಗತ್ಯ. ಬೇಸಿಗೆಯಲ್ಲಿ ಬಿಸಿಲಿನ ಪ್ರಖರತೆಯಿಂದ ಕಾಪಾಡಿಕೊಳ್ಳಲು ಎಲ್ಲರೂ ಮರಗಳ ನೆರವು ಪಡೆಯುತ್ತಾರೆ. ಆದರೆ, ಮನೆಯ ಮುಂದೆ ಒಂದು ಮರ ಅಡ್ಡವಾಗಿದ್ದರೆ ಅದನ್ನು ಕಡಿದು ಹಾಕುತ್ತಾರೆ. ನೆರಳು ಬೇಕು-ಮರ ಬೇಡ ಎಂಬ ಮನಸ್ಥಿತಿ ಬಹುತೇಕರ ಬಳಿ ಬರುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಪರಿಸರದ ಕುರಿತು ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಮುಂದೊಂದು ದಿನ, ಇಡೀ ವಾತಾವರಣ ಕಲುಷಿತಗೊಂಡು, ಈಗ ನಿರ್ಲಕ್ಷ್ಯ ಮಾಡಿದವರೇ ದೊಡ್ಡ ಸಮಸ್ಯೆ ಎದುರಿಸುವ ಸಂಕಷ್ಟ ಬರಲಿದೆ. ಹೀಗಾಗಿ ಸಸಿ ನೆಟ್ಟು ಪೋಷಿಸುವ ಹೊಣೆಗಾರಿಕೆ ಪ್ರತಿಯೊಬ್ಬರೂ ವಹಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.1 ಲಕ್ಷ ಸಸಿ ನೆಡುವ ಅಭಿಯಾನ :
ಕಳೆದ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿತ್ತು. ಇದನ್ನು ಜಿಲ್ಲೆಯ ಪ್ರತಿಯೊಬ್ಬರೂ ಗಮನಿಸಿದ್ದಾರೆ. ಇದಕ್ಕೆ ಅರಣ್ಯ ಪ್ರದೇಶ ಹೆಚ್ಚಳ ಮಾಡುವುದೇ ಒಂದು ಮಾರ್ಗ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ ಸಸಿ ನೆಟ್ಟು ಪೋಷಿಸುವ ಅಭಿಯಾನ ಆರಂಭಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜು, ಸ್ಮಶಾನ, ಸರ್ಕಾರಿ ಜಾಗೆ ಹೀಗೆ ಸ್ಥಳಾವಕಾಶ ಇರುವ ಕಡೆಗೆ 1 ಲಕ್ಷ ಸಸಿ ನೆಡಲಾಗುತ್ತಿದೆ. ಪೊಲೀಸ್ ಇಲಾಖೆಯೂ ವಿಶೇಷ ಕಾಳಜಿಯೊಂದಿಗೆ 12 ಸಾವಿರ ಸಸಿಗಳನ್ನು, ವಿವಿಧ ಪೊಲೀಸ್ ಠಾಣೆಗಳ ಆವರಣದಲ್ಲಿ ನೆಡುತ್ತಿದೆ ಎಂದು ಹೇಳಿದರು.ಪಿ.ಎಂ.ಶ್ರೀ ಕೇಂದ್ರೀಯ ವಿದ್ಯಾಲಯದಲ್ಲೂ ಸಸಿ ನೆಡುವ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ. ಈಗಾಗಲೇ ಶಾಲೆ ಆವರಣದಲ್ಲಿ ಇರುವ ಸಸಿಗಳ ಪೋಷಣೆಯ ಜತೆಗೆ ಹೊಸದಾಗಿ ನೆಡುವ ಎಲ್ಲ ಸಸಿಗಳ ಸಂರಕ್ಷಣೆಯ ಹೊಣೆಯನ್ನು ಪ್ರತಿಯೊಬ್ಬ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಹಿಸಬೇಕು. ಒಂದೊಂದು ಗಿಡ, ಒಬ್ಬೊಬ್ಬ ವಿದ್ಯಾರ್ಥಿಯೂ ಕಾಳಜಿಗೆ ವಹಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಭೂಪೇಂದ್ರ ಸಿಂಗ್, ಪಾಲಕರ ಸಲಹಾ ಸಮಿತಿ ಸದಸ್ಯರಾದ ಶ್ರೀಶೈಲ ಬಿರಾದಾರ, ಸೈಕ್ಲಿಂಗ್ ಕೋಚ್ ಅನಿತಾ ನಿಂಬರಗಿ, ಶಿಕ್ಷಕರಾದ ಗುರುಪ್ರಸಾದ, ದೇವಿಕಾ, ರಾಹುಲ್ ಮೇಶ್ರಾಮ್, ರಾಜೇಂದ್ರ ಸಿಂಗ್, ಜಯಶ್ರೀ ಇತರರು ಉಪಸ್ಥಿತರಿದ್ದರು.