ಜಿ. ಸೋಮಶೇಖರ್

ಕೊಟ್ಟೂರು: ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಮತ್ತು ಪೋಷಕರನ್ನು ಆಕರ್ಷಿಸುವ ಉದ್ದೇಶವಿರಿಸಿಕೊಂಡು ಸರ್ಕಾರ ಜಾರಿಗೆ ತಂದಿರುವ ದ್ವಿಭಾಷಾ ಮಾಧ್ಯಮ ತರಗತಿಗಳಿಗೆ ಕೊಟ್ಟೂರು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು ಖಾಸಗಿ ಶಾಲೆ ಬಿಟ್ಟು, ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಾತಿ ಆಗುತ್ತಿರುವುದು ಶಿಕ್ಷಣ ವಲಯಕ್ಕೆ ಸ್ಫೂರ್ತಿದಾಯಕ ಮತ್ತು ಗಮನಾರ್ಹ ವಿಷಯವಾಗಿದೆ.

ಶೂನ್ಯ ಶುಲ್ಕದ ಪ್ರವೇಶಾತಿಗೆ ಸರ್ಕಾರಿ ಶಾಲೆಗಳಲ್ಲಿ ಅವಕಾಶವಿದೆ. ತಾಲೂಕಿನ 18 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಾರಂಭಿಸಿದೆ. ಪ್ರತಿ ಶಾಲೆಯಿಂದ ಮೂವರು ಶಿಕ್ಷಕರಂತೆ 54 ಶಿಕ್ಷಕರಿಗೆ ದ್ವಿಭಾಷಾ ಮಾಧ್ಯಮ ಕಲಿಕೆಗೆ ನೆರವಾಗಲು ಇಎಂಟಿಟಿಪಿ ತರಬೇತಿ ನೀಡಿ ಕಲಿಕಾ ಬೋಧನಾ ಪ್ರಕ್ರಿಯೆಗಳಿಗೆ ಸಜ್ಜುಗೊಳಿಸುವ ಪ್ರಕ್ರಿಯೆ ಸಾಗಿದೆ. 1ರಿಂದ 5ನೇ ತರಗತಿ ವರೆಗೆ ಮಕ್ಕಳು ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಪ್ರವೇಶ ಪಡೆಯಲಾರಂಭಿಸಿದ್ದಾರೆ.

ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ತೀವ್ರ ಬಗೆಯ ಪೈಪೋಟಿ ಕೊಡುವ ಅನಿವಾರ್ಯತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳು ಆರಂಭವಾಗಿರುವುದು ಬಡ ಮತ್ತು ಮಾಧ್ಯಮ ವರ್ಗದ ಮಕ್ಕಳಿಗೆ ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಆರ್ಥಿಕತೆಯ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಪೋಷಕರ ಅನಿವಾರ್ಯತೆಗೆ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದು ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಮಾತ್ರ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದರು. ಇದೀಗ ಸರ್ಕಾರದ 18 ಶಾಲೆಗಳಲ್ಲಿ ಜೂನ್ ತಿಂಗಳ ಇಲ್ಲಿವರೆಗೆ 2 ಸಾವಿರಕ್ಕೂ ಹೆಚ್ಚು ಮಕ್ಕಳು ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಮುಂದಾಗಿದ್ದಾರೆ.


ಸದ್ಯಕ್ಕೆ ಆಂಗ್ಲ ಮಾಧ್ಯಮದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಒತ್ತುಕೊಟ್ಟರೆ ದ್ವಿಭಾಷಾ ಮಾಧ್ಯಮ ಕಲಿಕೆಗೆ ತಡ ಪ್ರಕ್ರಿಯೆವಾಗುತ್ತದೆ ಎಂಬ ಕಾರಣಕ್ಕಾಗಿ ಹಾಲಿ ಶಾಲೆಗಳಲ್ಲಿರುವ ಶಿಕ್ಷಕರಾಗಿರುವವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಎಂಟಿಟಿಪಿ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಕಲಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿರುವುದು ಪೋಷಕರಲ್ಲಿ ಭರವಸೆ ಮೂಡಿಸಿದೆ.

ದ್ವಿಭಾಷಾ ಮಾಧ್ಯಮ ಕಲಿಕೆಗೆ ಅನುಕೂಲವಾಗಲು 1ರಿಂದ 5ನೇ ತರಗತಿ ಮಕ್ಕಳಿಗೆ ದ್ವಿಭಾಷಾ ಮಾಧ್ಯಮದ ಪಠ್ಯಪುಸ್ತಕಗಳನ್ನು ಈಗಾಗಲೇ ವಿತರಿಸಲಾಗುತ್ತಿದೆ. ಜತೆಗೆ ಸಮವಸ್ತ್ರಗಳನ್ನು ನೀಡುವ ಕಾರ್ಯವೂ ಜೋರಾಗಿ ನಡೆದಿದೆ.

ಕೊಟ್ಟೂರು ತಾಲೂಕಿನಲ್ಲಿ ಆರಂಭಿಸಿರುವ ದ್ವಿಭಾಷಾ ಮಾಧ್ಯಮ ಕಲಿಕಾ ತರಬೇತಿಗೆ ಈಗಾಗಲೇ 2000ಕ್ಕೂ ಅಧಿಕ ಪ್ರವೇಶಗಳಾಗಿವೆ. ಜೂನ್ ಅಂತ್ಯದವರೆಗೂ ಪ್ರವೇಶಕ್ಕೆ ಅವಕಾಶವಿದೆ. ಕೆಲ ಪೋಷಕರು ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳ ಪ್ರವೇಶ ಪಡೆಯಲು ಮುಂದಾಗಿದ್ದಾರೆ ಎನ್ನುತ್ತಾರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಾಲೂಕು ನೋಡಲ್ ಅಧಿಕಾರಿ ಡಿ.ರೇವಣಸಿದ್ದಪ್ಪ.

ಕೊಟ್ಟೂರು ತಾಲೂಕಿನಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಸರ್ಕಾರದ ಆಯ್ದ ಶಾಲೆಗಳಲ್ಲಿ ಆರಂಭಿಸಿರುವುದು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಕಲಿಕೆಗೆ ಅನುಕೂಲವಾಗಿದೆ. ಅದರಲ್ಲೂ ಆಂಗ್ಲ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎನ್ನುತ್ತಾರೆ ಚಪ್ಪರದಹಳ್ಳಿಯ ಪೋಷಕ ವೀರಣ್ಣ.