ಸಾರಾಂಶ
ಹಾವೇರಿ: ಬಾಲವಿಕಾಸ ಅಕಾಡೆಮಿಯು ಮಕ್ಕಳ ಸೂಪ್ತ ಪ್ರತಿಭೆ ಹೊರಹಾಕಲು ಇಂತಹ ವೇದಿಕೆಯನ್ನು ಮಕ್ಕಳಿಗೆ ಒದಗಿಸಿದೆ. ಮಕ್ಕಳೊಂದಿಗೆ ನಾವು ಮಕ್ಕಳಾಗಿ ಬೆರೆತಾಗ ಮಾತ್ರ ಮಕ್ಕಳಲ್ಲಿನ ಕಲೆ ಗುರುತಿಸಲು ಸಾಧ್ಯ ಎಂದು ಧಾರವಾಡ ಬಾಲ ವಿಕಾಸ ಅಕಾಡೆಮಿ ಯೋಜನಾ ನಿರ್ದೇಶಕಿ ಭಾರತಿ ಶೆಟ್ಟರ ಹೇಳಿದರು.ನಗರದ ಗೆಳೆಯರ ಬಳಗ ಸಭಾ ಭವನದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಜರುಗಿದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಮಕ್ಕಳು ಸಕ್ರೀಯವಾಗಿ ಭಾಗವಹಿಸಬೇಕು ಮತ್ತು ಮುಕ್ತವಾಗಿ ಮಕ್ಕಳು ಬೆರೆಯುವುದಕ್ಕಾಗಿ ಮಕ್ಕಳ ಹಬ್ಬ ಕಾರ್ಯಕ್ರಮ ಒಳ್ಳೆಯ ವೇದಿಕೆಯಾಗಿದೆ. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿಸದ್ದ ಜಿ.ಪಂ.ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಮಾತನಾಡಿ, ಮಕ್ಕಳ ಹಬ್ಬದ ಸುಂದರವಾದ ವಾತಾವರಣ ನಿರ್ಮಾಣವಾಗಿದೆ, ಮಕ್ಕಳು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದಾಗ ಮಾತ್ರ ಒಳ್ಳೆಯ ಪ್ರತಿಭೆಯ ಅನಾವರಣಗೊಳ್ಳುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಗೀತ, ಚಿತ್ರಕಲೆ, ಕ್ಲೇಮಾಡೆಲಿಂಗ ಜಾನಪದ ನೃತ್ಯ, ನಾಟಕ ಪ್ರದರ್ಶನ, ಡೊಳ್ಳು ಕುಣಿತ, ಕಂಸಾಳೆ ಚಟುವಟಿಕೆಗಳು ಜರುಗಿದವು. ವಿಜೇತ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಭಾಗಿಯಾದ ಎಲ್ಲ ಮಕ್ಕಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್. ಎಚ್. ಮಜೀದ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ, ಪರಿವೀಕ್ಷಣಾಧಿಕಾರಿ ಮುನೀಶ್ವರ ಚೂರಿ, ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧಿಕಾರಿ ದೀಪಾ ಜಾವುರ, ಜಿಲ್ಲಾ ಬಾಲವಿಕಾಸ ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯ ಪ್ರಕಾಶಗೌಡ ಗಡಿಯಪ್ಪಗೌಡ್ರ, ಸಿ.ಎಫ್. ಮೂಲಿಮನಿ ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಸೋಮನಗೌಡ ಗಾಳಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕುರಹಟ್ಟಿ ವಂದಿಸಿದರು.