ಸಾರಾಂಶ
ಪುಸ್ತಕ ಸಿರಿ ಗೌರವ, ಓದು ಮನೆ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ । ನಲಿನ್ ಅತುಲ್ ಹೇಳಿಕೆಕನ್ನಡಪ್ರಭ ವಾರ್ತೆ ಕೊಪ್ಪಳ
ಪಾಲಕರ ಸಹಕಾರದೊಂದಿಗೆ ಜಿಲ್ಲೆಯ ಮಕ್ಕಳು ತಮ್ಮ ಮನೆಗಳಲ್ಲಿ ನಿರ್ಮಿಸಿಕೊಂಡಿರುವ ಮಕ್ಕಳ ಮನೆ ಗ್ರಂಥಾಲಯ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಜರುಗಿದ ಪುಸ್ತಕ ಸಿರಿ ಗೌರವ, ಓದು ಮನೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಹತ್ತು ವರ್ಷದ ಹಿಂದೆ ಶೇ.60ರಷ್ಟು ಇದ್ದ ಗ್ರಂಥಾಲಯಗಳಲ್ಲಿ ಪುಸ್ತಕ ಓದುವ ಸಂಖ್ಯೆಯು 2018ರಲ್ಲಿ 30ರಿಂದ 36ರಷ್ಟು ಇತ್ತು. 2022ಕ್ಕೆ ಶೇ. 57ರಷ್ಟು ಆಗಿ, ಪ್ರಸ್ತುತ ಆ ಸಂಖ್ಯೆ ಮತ್ತೇ ಶೇ.60ಕ್ಕೆ ಬಂದಿದೆ. 2020-21ರಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಆರಂಭವಾದ ಓದು ಬೆಳಕು ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳು ಸೇರಿ ಗ್ರಂಥಾಲಯಗಳಲ್ಲಿ ಸುಮಾರು 10 ಲಕ್ಷ ನೋಂದಣಿಯಾಗಿತ್ತು. ಇದರಲ್ಲಿ 8 ಲಕ್ಷಕ್ಕೂ ಅಧಿಕ ನೋಂದಣಿ ನಮ್ಮ ಕಲ್ಯಾಣ ಕರ್ನಾಟಕದ ಭಾಗದ ಮಕ್ಕಳಿಂದಾಗಿತ್ತು. ಜಿಲ್ಲೆಯಿಂದ ಆರಂಭವಾದ ಪುಸ್ತಕ ಜೋಳಿಗೆ ಕಾರ್ಯಕ್ರಮವು ರಾಜ್ಯಕ್ಕೆ ಮಾದರಿಯಾಯಿತು. ಈಗ ನಮ್ಮ ಜಿಲ್ಲೆಯ ಸುಮಾರು 300 ಕ್ಕೂ ಅಧಿಕ ಮಕ್ಕಳು ತಮ್ಮ-ತಮ್ಮ ಮನೆಯಲ್ಲಿ 100ಕ್ಕಿಂತ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ಮನೆಯಲ್ಲಿಯೇ ಗ್ರಂಥಾಲಯ ಮಾಡಿಕೊಂಡಿರುವುದು ಸಂತಸ ತಂದಿದೆ. ಈ ಪ್ರಯತ್ನವು ಭವಿಷ್ಯದಲ್ಲಿ ಆ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.ರಾಜ್ಯದಲ್ಲಿ 6 ಸಾವಿರಕ್ಕಿಂತ ಹೆಚ್ಚು ಗ್ರಾಪಂಗಳು ಹಾಗೂ 5 ಸಾವಿರಕ್ಕಿಂತ ಗ್ರಾಪಂ ಗ್ರಂಥಾಲಯಗಳಿವೆ. ಆದರೆ, ಶಾಲೆಯ ಓರ್ವ ಮಗು ಮನೆಯಲ್ಲಿಯೇ 100 ಪುಸ್ತಕಗಳನ್ನು ಇಟ್ಟುಕೊಂಡು ಗ್ರಂಥಾಲಯ ಮಾಡಿರುವ ಕೆಲಸ ಬಹುಶಃ ಜಿಲ್ಲೆಯಲ್ಲಿಯೇ ಮಾತ್ರ ಆಗಿದೆ. ಇಂತಹ ಕೆಲಸ ಹೆಚ್ಚಾಗಬೇಕು. ಮಕ್ಕಳು ಶಾಲಾ ಪಠ್ಯ-ಪುಸ್ತಕಗಳ ಜೊತೆಗೆ ರಾಷ್ಟ್ರ, ರಾಜ್ಯಗಳ ಕಲೆ, ಸಾಹಿತ್ಯ, ಸಂಸ್ಕೃತಿ, ಆಚರಣೆ, ಇತಿಹಾಸ ಹಾಗೂ ಇತರೆ ಮಾಹಿತಿ, ಕಥೆಗಳು, ಕಾದಂಬರಿ, ಕಾವ್ಯ ಮತ್ತು ತಮ್ಮ ಜ್ಞಾನವನ್ನು ಹೆಚ್ಚಿಸುವಂತಹ ಒಳ್ಳೆಯ ಪುಸ್ತಕಗಳನ್ನು ಸಂಗ್ರಹಿಸಿ, ಅವುಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಜೀವನದಲ್ಲಿ ಓದು ಮುಖ್ಯ. ಮಕ್ಕಳು ಪುಸ್ತಕಗಳನ್ನು ಓದುವುದು ಮತ್ತು ಬರೆಯುವಂತಹ ಕೌಶಲ್ಯ ರೂಡಿಸಿಕೊಳ್ಳಬೇಕು. ಜೀವನದಲ್ಲಿನ ಸಮಸ್ಯೆ ಮತ್ತು ಸವಾಲುಗಳನ್ನು ಪರಿಹರಿಸುವಂತಹ ಶಕ್ತಿ ಪುಸ್ತಕಗಳಲ್ಲಿ ಅಡಗಿದೆ. ಪುಸ್ತಕಗಳನ್ನು ನಿರಂತರವಾಗಿ ಓದುವುದರಿಂದ ಜೀವನದಲ್ಲಿ ಅತ್ಯುತ್ತಮ ಸ್ಥಾನ ಪಡೆಯಲು ಸಾಧ್ಯ. ಇಂದಿನ ದಿನಮಾನಗಳಲ್ಲಿ ಗಣಿತಕ್ಕೆ ಬಹಳ ಪ್ರಾಮುಖ್ಯತೆಯಿದ್ದು, ಯಾವುದೇ ವ್ಯಾಪಾರ-ವಹಿವಾಟು ಮಾಡಲು ಲೆಕ್ಕ ಅಗತ್ಯವಾಗಿದೆ. ಗಣಿತವು ಮೆದುಳಿನ ಸಾಮರ್ಥ್ಯ ಮತ್ತು ಶಕ್ತಿ ಹೆಚ್ಚಿಸುತ್ತದೆ. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಕ ಓದುವುದರಿಂದ ಅವರ ಆದರ್ಶಗಳು ನಮಗೆ ತಿಳಿಯುತ್ತವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಕೂಡಾ ಜೀವನದಲ್ಲಿ ಯಶಸ್ವಿಯಗುತ್ತೇವೆ ಎಂದರು.ಮಕ್ಕಳ ಸ್ವರಚಿತ ಸಣ್ಣ ಕಥೆಗಳ ಪುಸ್ತಕಗಳ ಪ್ರದರ್ಶನ:ಕಾರ್ಯಕ್ರಮದಲ್ಲಿ ಮಕ್ಕಳ ಸ್ವರಚಿತ ಸಣ್ಣ ಕಥೆಗಳ ಪುಸ್ತಕಗಳ ಪರಿಚಯ ಮತ್ತು ಪ್ರದರ್ಶನ ಮಾಡಲಾಯಿತು. ಓದುಮನೆ ಮಕ್ಕಳಿಗೆ ಪುಸ್ತಕಸಿರಿ ಗೌರವ ನೀಡಲಾಯಿತು.
ಕೊಪ್ಪಳ ಯುನಿಸೆಫ್ ವಿಭಾಗದ ಹರೀಶ್ ಜೋಗಿ, ಕಲಿಕಾ ಟಾಟಾ ಟಸ್ಟ್ ಕಲ್ಯಾಣ ಕರ್ನಾಟಕ ಭಾಗದ ಯೋಜನಾ ನಿರ್ದೇಶಕ ಗಿರೀಶ್, ಕಲಿಕಾ ಟಾಟಾ ಟ್ರಸ್ಟ್‌ನ ಕಾರ್ಯಕ್ರಮ ಅಧಿಕಾರಿ ಶಿವಕುಮಾರ ಯಾದವ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಜಲಕ್ಷ್ಮೀ, ಸಂಯೋಜಕ ಕಲ್ಲಪ್ಪ ತಳವಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಶಾಲಾ ಮಕ್ಕಳು ಸೇರಿದಂತೆ ಮತ್ತಿತರರಿದ್ದರು.