ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜೀವನದುದ್ದಕ್ಕೂ ಹೆತ್ತವರ ಸೇವೆ ಮಾಡುವುದು ಮಕ್ಕಳ ಜವಾಬ್ದಾರಿ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ನಗರದ ಬ್ಯಾಕ್ ವರ್ಡ್ ವಸತಿ ನಿಲಯದ ಮೈದಾನದಲ್ಲಿ ಸಾಯಿ ಶಿಕ್ಷಣ ಸಂಸ್ಥೆ (ರಿ), ಯಾದಗಿರಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಹಿರಿಯ ನಾಗರಿಕರಿಗೆ ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಅವರನ್ನು ದೂರವಿಡುವುದು ಸಾಮಾನ್ಯ ಸಂಗತಿ. ಹೀಗಾಗಿ ಹಿರಿಯ ನಾಗರಿಕರಾದ ನಾವು ಮನೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಬೇಕು ಎಂದು ಹೇಳಿದರು.ಇಂದಿನ ದಿನಗಳಲ್ಲಿ ಗಂಡು ಮಕ್ಕಳಿಗೆ ನೀಡುವ ಹೆಚ್ಚು ಪ್ರಾಮುಖ್ಯತೆಯನ್ನು ಹೆಣ್ಣು ಮಕ್ಕಳಿಗೆ ನೀಡುತ್ತಿಲ್ಲ. ನಿಜವಾಗಲೂ ತಂದೆ-ತಾಯಿಯರ ಮೇಲೆ ಇರುವ ಪ್ರೀತಿ ಪ್ರೇಮ ಹೆಣ್ಣು ಮಕ್ಕಳಿಗೆ, ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಸವಾಲು ಸ್ವೀಕರಿಸಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ತನ್ನದೇ ಆದ ನೆಲೆ ಕಂಡುಕೊಂಡು ಧೈರ್ಯದಿಂದ ಮುನ್ನಡೆಯುತ್ತಿದ್ದಾಳೆ. ಇಂತಹ ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಭಗವಂತ ಅನವಾರ ಮಾತನಾಡಿ, ನಾವು ಪ್ರತಿ ವರ್ಷ ಆ.21 ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತ್ತೇವೆ. ಈ ದಿನವನ್ನು ಎಲ್ಲಾ ಹಿರಿಯ ನಾಗರಿಕರಿಗೆ ಸಮರ್ಪಿಸಲಾಗಿದೆ. 21 ಆಗಸ್ಟ್ 1988 ರಂದು ಅಮೇರಿಕಾದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಹಿರಿಯ ನಾಗರಿಕರ ದಿನವನ್ನು ಪರಿಚಯಿಸಿದ ಕೀರ್ತಿ ರೊನಾಲ್ಡ್ ರೇಗನ್ ಅವರಿಗೆ ಸಲ್ಲುತ್ತದೆ ಎಂದರು.ಡಾ. ಸಾಜೀದ್ ಮಾತನಾಡಿದರು. ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ಡಾ. ಎಂ.ಎಸ್. ಪಾಟೀಲ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಂಡೆಪ್ಪ ಆಕಳ, ಸಿ.ಎಂ. ಪಟ್ಟೇದಾರ್ ಸೇರಿದಂತೆ ಇತರರಿದ್ದರು.
ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲು ಬಂದಿದ್ದ ವೈದ್ಯರಿಗೆ ಸನ್ಮಾನಿಸಲಾಯಿತು. ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಜಿತ್ ರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ಪಾಟೀಲ್ ನಿರೂಪಿಸಿದರು. ಶರಣಪ್ಪ ವಂದಿಸಿದರು.