ಸಂಚಾರಿ ನಿಯಮ ಪಾಲಿಸಿ,ಅಮೂಲ್ಯ ಜೀವ ಉಳಿಸಿ: ಸಾರಿಗೆ ಅಧಿಕಾರಿ ಗಾಯಿತ್ರಿ

| Published : Feb 15 2024, 01:15 AM IST

ಸಂಚಾರಿ ನಿಯಮ ಪಾಲಿಸಿ,ಅಮೂಲ್ಯ ಜೀವ ಉಳಿಸಿ: ಸಾರಿಗೆ ಅಧಿಕಾರಿ ಗಾಯಿತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಲಕರ ತಪ್ಪುಗಳಿಂದ ಅಪಘಾತಗಳಾಗಿ ಅಮಾಯಕರು ಜೀವ ಕಳೆದುಕೊಂಡು ಅವರ ಕುಟುಂಬದಸ್ಥರು ಬೀದಿ ಪಾಲಾಗುತ್ತಿದ್ದಾರೆ. ಆದ್ದರಿಂದ ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೀವನದ ಸುಸ್ಥಿರ ಭವಿಷ್ಯಕ್ಕಾಗಿ ರಸ್ತೆ ಸುರಕ್ಷತೆಯು ಬಹಳ ಮುಖ್ಯ. ಹೆಚ್ಚಿನ ರಸ್ತೆ ಅಪಘಾತಗಳಿಗೆ ಕಾರಣ ರಸ್ತೆ ನಿಯಮಗಳನ್ನು ಪಾಲಿಸದೆ ಉಲ್ಲಂಘಿಸುತ್ತಿರುವುದು ಎಂದು ವಿದ್ಯಾರ್ಥಿಗಳಿಗೆ ಬೆಂಗಳೂರು ಗ್ರಾಂಮಾತರ ಜಂಟಿ ಸಾರಿಗೆ ಅಧಿಕಾರಿ ಗಾಯಿತ್ರಿ ದೇವಿ ಸಲಹೆ ನೀಡಿದರು.

ಮಂಗಳವಾರ ಸಾರಿಗೆ ಇಲಾಖೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಚಿಕ್ಕಬಳ್ಳಾಪುರ ಹಾಗೂ ಬಿ.ಜಿ.ಎಸ್. ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ನಗರದ ಹೊರವಲಯದ ಎಸ್ ಜೆಸಿಐಟಿ ಆವರಣದ ಬಿ.ಜಿ.ಎಸ್ ಕಾಲೇಜಿನ ಸಂಭಾಗಣದಲ್ಲಿ ನಡೆದ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಆದೇಶದಂತೆ ಪ್ರತಿವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಆಚರಿಸಲಾಗುತ್ತದೆ. ಜ.15 ರಿಂದ ಫೆ. 14 ವರೆಗೂ ಒಂದು ತಿಂಗಳ ಕಾಲದ ಕಾರ್ಯಕ್ರಮದ ಅಂಗವಾಗಿ ಚಾಲಕರಿಗೆ, ವಾಹನ ಮಾಲೀಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು ಎಂದರು.

ಚಾಲಕರ ತಪ್ಪುಗಳಿಂದ ಅಪಘಾತಗಳಾಗಿ ಅಮಾಯಕರು ಜೀವ ಕಳೆದುಕೊಂಡು ಅವರ ಕುಟುಂಬದಸ್ಥರು ಬೀದಿ ಪಾಲಾಗುತ್ತಿದ್ದಾರೆ. ಆದ್ದರಿಂದ ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ಉಪಾಧೀಕ್ಷಕ ಎಸ್.ಶಿವಕುಮಾರ್ ಮಾತನಾಡಿ, ಚಾಲಕರು ಶಿಸ್ತುಬದ್ಧ ಹಾಗೂ ಮಿತ ಚಾಲನೆ ಮಾಡಬೇಕು. ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರಿ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ತೋರದೆ ನಿಯಮ ಪಾಲಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ವೇಗದ ಮಿತಿ ಇರಬೇಕು. ಬೈಕ್ ಚಲಾಯಿಸುವಾಗ ವೀಲಿಂಗ್ ಮಾಡಬಾರದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ವಿವೇಕಾನಂದ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್ ನಲ್ಲಿ ಎಲ್.ಎಲ್, ಪರವಾನಗಿ, ಆರ್ಟಿಒ ಸೌಲಭ್ಯಗಳನ್ನು ಪಡೆಯುವ ಬಗ್ಗೆ ವಿವರಿಸಿದರು. ಎಲ್ಲ ವಾಹನ ಚಾಲಕರು ಹಾಗೂ ಮಾಲೀಕರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಒಂದು ಸೆಟ್ ಅನ್ನು ವಾಹನದಲ್ಲಿ ಜೋಪಾನವಾಗಿ ಇಟ್ಟಿರಬೇಕು. ದಾಖಲೆಗಳಿಲ್ಲದೆ ರಸ್ತೆಗೆ ಬರಬಾರದು. ಚಾಲನಾ ಪರವಾನಗಿ, ವಾಹನದ ಆರ್.ಸಿ, ವಿಮೆ ದಾಖಲೆ, ಎಮಿಷನ್ ಪ್ರಮಾಣ ಪತ್ರ, ಮತ್ತಿತರ ವಿವರ ಹೊಂದಿರಬೇಕು ಎಂದು ತಿಳಿಸಿದರು.

ಬಿ.ಜಿ.ಎಸ್ ಕಾಲೇಜಿನ ಆವರಣದಲ್ಲಿ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಮೋಟಾರ್ ವಾಹನ ನಿರೀಕ್ಷಕ ಮಹದೇವಪ್ಪ, ಕಾಲೇಜಿನ ಪ್ರಾಂಶುಪಾಲರು ಜಿ.ಟಿ. ರಾಜು ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

-------------------------------

35ನೇ ರಾಷ್ಟೀಯ ರಸ್ತೆ ಸುರಕ್ಷತಾ ಮಾಸದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಜಂಟಿ ಸಾರಿಗೆ ಅಧಿಕಾರಿ ಗಾಯಿತ್ರಿ ಉದ್ಘಾಟಿಸಿದರು.