ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಚಿಮ್ಮಡ ಗ್ರಾಮದ ಹಟಗಾರ ಸಮಾಜದ ಆರಾಧ್ಯ ದೇವತೆ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವ, ದೇವಿಯ ರಥೋತ್ಸವ ಹಾಗೂ ಜನಪದ ಉತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆದವು.ಮಹಾ ಅಭಿಷೇಕದೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಸಮಾಜದ ಮಹಿಳೆಯರಿಂದ ಶ್ರೀದೇವಿಯ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮುಂಬೈ ಮಾದೇಲಿ, ಕಿಚಡಿ ಮಹಾಪ್ರಸಾದ ವಿತರಣೆಯಲ್ಲಿ ಶ್ರೀ ಬನಶಂಕರಿದೇವಿ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮದ ಸರ್ವ ಸಮಾಜದ ಪ್ರಮುಖರು ನೇತೃತ್ವ ವಹಿಸಿದ್ದರು. ಸಂಜೆ 5 ಗಂಟೆಗೆ ದೇವಿಯ ಅಲಂಕೃತ ರಥೋತ್ಸವ ಕರಡಿ ಮಜಲು, ಭಾಜಾ ಬಜಂತ್ರಿ ಸೇರಿದಂತೆ ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ರಾತ್ರಿ 10 ಗಂಟೆಗೆ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ಬನಶಂಕರಿದೇವಿ ದೇವಸ್ಥಾನ ಸಮಿತಿ ಚಿಮ್ಮಡ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಖ್ಯಾತ ಜಾನಪದ ಗಾಯಕ ವೀರಣ್ಣ ಅಂಗಡಿಯವರ ತಂಡ ಹಾಗೂ ಶ್ರೀ ಸಿದ್ದಲಿಂಗೇಶ್ವರ ಹಾಸ್ಯ ಮತ್ತು ಜಾನಪದ ಕಲಾಸಂಘ ಅಡವಿಸೋಮಾಪುರ ಇವರ ಜಂಟಿ ನೇತೃತ್ವದಲ್ಲಿ ಜನಪದೋತ್ಸವ ಕಾರ್ಯಕ್ರಮದಲ್ಲಿ ಹಲವಾರು ಜನಪದ ಪ್ರಕಾರದ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಜನಮನ ಸೆಳೆದರು.
ಸ್ಥಳೀಯರೂ ಸೇರಿದಂತೆ ನೆರೆಯ ಪಟ್ಟಣಗಳಿಂದ ಸಹಸ್ರಾರು ಜನ ಭಕ್ತಾದಿಗಳು ರಥೋತ್ಸವ ಹಾಗೂ ಜನಪದ ಉತ್ಸವದಲ್ಲಿ ಭಾಗಿಯಾದರು.