ಸಾರಾಂಶ
ಒಂದೆಡೆ ಕೆಲವು ಸಂಘಟನೆಗಳು ಚೈನಾ ಮೇಡ್ ಗೂಡಿದೀಪಗಳನ್ನು ಖರೀದಿಸಬೇಡಿ, ಸ್ಥಳೀಯವಾಗಿ ಸಾಂಪ್ರದಾಯಿಕವಾಗಿ ತಯಾರಿಸಿದ ಗೂಡುದೀಪಗಳನ್ನು ಖರೀದಿಸಿ, ಪ್ರೋತ್ಸಾಹಿಸಿ ಎಂದು ಕರೆ ನೀಡುತ್ತಿವೆ.
ಕನ್ನಡಪ್ರಭ ವಾರ್ತೆ ಉಡುಪಿ
ದೀಪಾವಳಿ ಹಬ್ಬ ಬರುತ್ತಿದ್ದಂತೆ ಅದೆಲ್ಲಿಂದಲೊ ಚೈನಾ ಮೇಡ್ ಗೂಡುದೀಪಗಳು ನಗರದ ಅಂಗಡಿಗಳಲ್ಲಿ ಧುತ್ತೆಂದು ಕಾಣಿಸಿಕೊಂಡು ಮಾರಾಟವಾಗುತ್ತಿವೆ.ದೀಪಾವಳಿ ಎಂದರೆ ನೆನಪಾಗುವುದು ಗೂಡುದೀಪಗಳು, ಹಣತೆಗಳು, ಪಟಾಕಿಗಳು, ಸಿಹಿತಿಂಡಿ ಮತ್ತು ಹೊಸ ಬಟ್ಟೆಗಳು, ನಗರದ ಫ್ಯಾನ್ಸಿ ಅಂಗಡಿಗಳ ಮುಂದೆ ವೈವಿಧ್ಯಮಯ ಬಣ್ಣಗಳು ಮತ್ತು ವಿವಿಧ ಗಾತ್ರಗಳು ಗೂಡುದೀಪಗಳು ಮನಸೆಳೆಯುತ್ತಿವೆ.
ಒಂದೆಡೆ ಕೆಲವು ಸಂಘಟನೆಗಳು ಚೈನಾ ಮೇಡ್ ಗೂಡಿದೀಪಗಳನ್ನು ಖರೀದಿಸಬೇಡಿ, ಸ್ಥಳೀಯವಾಗಿ ಸಾಂಪ್ರದಾಯಿಕವಾಗಿ ತಯಾರಿಸಿದ ಗೂಡುದೀಪಗಳನ್ನು ಖರೀದಿಸಿ, ಪ್ರೋತ್ಸಾಹಿಸಿ ಎಂದು ಕರೆ ನೀಡುತ್ತಿವೆ. ಅದಕ್ಕಾಗಿ ಸಾಂಪ್ರದಾಯಿಕ ಗೂಡು ದೀಪಗಳ ರಚನೆಯ ಸ್ಪರ್ಧೆಯನ್ನೂ ಆಯೋಜಿಸಲಾಗುತ್ತಿದೆ.ಇನ್ನೊಂದೆಡೆ ತಮ್ಮ ವೈವಿಧ್ಯತೆಯಿಂದಾಗಿ ಚೈನಾ ಮೇಡ್ ಗೂಡು ದೀಪಗಳು ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿವೆ. ನಗರದಲ್ಲಿ 100ರಿಂದ 1000 ರು.ಗಳ ವರೆಗಿನ ಅಧುನಿಕ ಗೂಡುದೀಪಗಳು ಮಾರಾಟಕ್ಕಿವೆ. ಕೆಲವು ಆಧುನಿಕ ಗೂಡುದೀಪಗಳು, ಬಟ್ಟೆ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದು, ಹಬ್ಬ ಮುಗಿದ ನಂತರ ಅದು ಪರಿಸರಕ್ಕೂ ಹಾನಿಯನ್ನುಂಟು ಮಾಡುತ್ತವೆ. ಆದರೂ ಅವುಗಳ ಬೇಡಿಕೆ ಹೆಚ್ಚಿದೆ.
ಪಟಾಕಿ ಮಾರಾಟವೂ ಹೆಚ್ಚಿದೆ. ಪಟಾಕಿಗೆ ಬೇಡಿಕೆ ಹೆಚ್ಚಿರುವುದನ್ನು ಮನಗಂಡು ಅಂಗಡಿದಾರರು ಅಕ್ರಮವಾಗಿ ಪಟಾಕಿ ಸಂಗ್ರಹಿಸಿಟ್ಟು, ಪೊಲೀಸರು ದಾಳಿ ನಡೆಸಿದ ಘಟನೆ ಕೂಡ ನಗರದಲ್ಲಿ ನಡೆದಿದೆ.ರಥಬೀದಿಯಲ್ಲಿ ದೀಪದ ಹಣತೆಯ ಮಾರಾಟ ಕೂಡ ಜೋರಾಗಿದೆ. ವಿದ್ಯುತ್‌ನಿಂದ ಬೆಳಗುವ ಹಣತೆಗಳೂ ಕೂಡ ಮಾರುಕಟ್ಟೆಗೆ ಬಂದಿವೆ.