ಶೈಕ್ಷಣಿಕ ಬೆಳವಣಿಗೆಯಲ್ಲಿ ಚಿಂಚೋಳಿ ಮುಂದಾಗಬೇಕಿದೆ

| Published : May 18 2024, 12:32 AM IST

ಸಾರಾಂಶ

ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಬೇಕಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳು ಸಿಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ತೀರಾ ಹಿಂದುಳಿದ ಪ್ರದೇಶವಾಗಿದ್ದರೂ ಸಹಾ ಉತ್ತಮ ವಾತಾವರಣ ಹೊಂದಿದೆ. ಸುಂದರ ಬೆಟ್ಟಗುಡ್ಡಗಳಿಂದ ಕೂಡಿದ ಅರಣ್ಯಪ್ರದೇಶವನ್ನು ಹೊಂದಿದೆ. ಆದರೆ ಇಲ್ಲಿ ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಚಿಂಚೋಳಿ ಜೆಎಂಎಫ್‌ಸಿ ನ್ಯಾಯಾಧೀಶ ವಿ.ರವಿಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ನ್ಯಾಯಾಲಯದಿಂದ ಬೇರೆಡೆ ವರ್ಗಾವಣೆಯಾದ ನಿಮಿತ್ತ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಬೀಳ್ಕೂಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಬೇಕಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳು ಸಿಗಬೇಕಾಗಿದೆ. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ಜನರು ಜಾಗೃತರಾಗಬೇಕು. ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಚಿಂಚೋಳಿ ತಾಲೂಕಿನಲ್ಲಿ ಸೇವೆ ಮಾಡಿರುವುದು ಎಂದಿಗೂ ಮರೆಯುವುದಿಲ್ಲ ಎಂದು ನ್ಯಾಯಾಧೀಶ ವಿ.ರವಿಕುಮಾರ ಹೇಳಿದರು.

ಸಮಾರಂಭದಲ್ಲಿ ಹಿರಿಯ ವಕೀಲರಾದ ಶಿವಶರಣಪ್ಪ ಜಾಪಟ್ಟಿ,ಮಾಣಿಕರಾವ ಗುಲಗುಂಜಿ, ಶಶಿಕಾಂತ ಆಡಕಿ, ಶರಣರೆಡ್ಡಿ ಪೊಂಗಾ ಸುಲೇಪೇಟ, ಶಾಮರಾವ ಹೊಸಮನಿ ದೇಗಲಮಡಿ, ಜಗನ್ನಾಥ ಗಂಜಗಿರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ನ್ಯಾಯಾಲಯ ನ್ಯಾಯಾಧೀಶರಾಗಿ ಪ್ರಭಾರ ವಹಿಸಿಕೊಂಡ ಹೆಚ್ಚುವರಿ ನ್ಯಾಯಾಲಯ ನ್ಯಾಯಾಧೀಶ ದತ್ತಕುಮಾರ ಜವಳಕರ ಅವರಿಗೆ ಸನ್ಮಾನಿಸಲಾಯಿತು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಗುಂಡಪ್ಪ ಗೋಖಲೆ ತುಮಕುಂಟಾ, ಜಗನ್ನಾಥ ಅಗ್ನಿಹೋತ್ರಿ, ವಿಶ್ವನಾಥ ಬೆನಕಿನ, ಅರುಣಕುಮಾರ ಹೆಗಡೆ, ಸಂಜೀವಕುಮಾರ ಹಸರಗುಂಡಗಿ, ಚಂದ್ರಶೆಟ್ಟಿ ಜಾಧವ್, ವಿಜಯಕುಮಾರ ರಾಠೋಡ ಇನ್ನಿತರಿದ್ದರು.