ಜನವರಿ 18ರಂದು ಸಂಜೆ 5 ಗಂಟೆಗೆ ಈ ಗಾಳಿಪಟ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಗಂಟೆ 3 ರಿಂದ ರಾತ್ರಿ 9 ರ ತನಕ ಗಾಳಿಪಟ ಉತ್ಸವ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡ ಹಾಗೂ ಒಎನ್‌ಜಿಸಿ ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ಕರಾವಳಿ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರಿನ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಜನವರಿ 18 ಮತ್ತು 19 ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಸುದ್ದಿಗೋಷ್ಠಿಯಲ್ಲಿ ಗಾಳಿಪಟ ಉತ್ಸವದ ಪೋಸ್ಟರ್‌ನ್ನು ಅನಾವರಣಗೊಳಿಸಿದರು.

ಇದು ಟೀಮ್ ಮಂಗಳೂರು ತಂಡದ 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದೆ. ಇಂಗ್ಲೆಂಡ್, ಜರ್ಮನಿ, ನೆದರ್ ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಇಷ್ಟೊನಿಯ, ಸ್ವೀಡನ್, ಇಂಡೋನೇಷಿಯಾ, ಪೊರ್ಚುಗಲ್ ಮುಂತಾದ ವಿದೇಶಿ ಗಾಳಿಪಟ ತಂಡಗಳು ಮತ್ತು ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ಮುಂತಾದ ರಾಜ್ಯಗಳಿಂದ ಗಾಳಿಪಟ ತಂಡಗಳು ಆಗಮಿಸುತ್ತಿವೆ. ಈ ಉತ್ಸವದಲ್ಲಿ ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಬಣ್ಣ, ಬಣ್ಣಗಳ ಗಾಳಿಪಟಗಳು ಹಾರಲಿವೆ. ಚೈನೀಸ್‌ ಡ್ರ್ಯಾಗನ್‌ ಗಾಳಿಪಟವನ್ನು ಇಂಡೋನೇಷಿಯಾ ತನ್ನ ಸಂಸ್ಕೃತಿಯ ಪ್ರತೀಕವಾಗಿ ಹಾರಿಸಲಿದೆ. ಮ್ಯೂಸಿಕ್‌ಗೆ ತಕ್ಕಂತೆ ನರ್ತಿಸುವ ಸ್ಟಂಟ್‌ ಗಾಳಿಪಟವನ್ನು ಗ್ರೀಸ್‌ನ ಮಂದಿ ಹಾರಿಸಲಿದ್ದಾರೆ. ಕಥಕ್ಕಳಿಯ ನೂರು ಗಾಳಿಪಟವೂ ಗಗನದಲ್ಲಿ ಮಿಂಚಲಿದೆ ಎಂದರು.

ಟೀಮ್ ಮಂಗಳೂರು ತಂಡ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಗ್‌ಕಾಂಗ್‌, ದುಬೈ, ಕತಾರ್ ಮುಂತಾದ ದೇಶಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರಗೊಳಿಸಿವೆ ಎಂದರು.

‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಈ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ದೇಶ, ವಿದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶವಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ್ ಗಾಳಿಪಟಗಳು (ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬೃಹತ್ ಗಾಳಿಪಟಗಳು) ಸೀರೀಸ್ ಕೈಟ್ (ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರ ಮನರಂಜನೆಗೆ ಸೂತ್ರವಾಗಿರಲಿದೆ ಎಂದರು.

ಜನವರಿ 18ರಂದು ಸಂಜೆ 5 ಗಂಟೆಗೆ ಈ ಗಾಳಿಪಟ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಗಂಟೆ 3 ರಿಂದ ರಾತ್ರಿ 9 ರ ತನಕ ಗಾಳಿಪಟ ಉತ್ಸವ ನಡೆಯಲಿದೆ ಎಂದರು.

ಟೀಂ ಮಂಗಳೂರು ತಂಡದ ಸರ್ವೇಶ್‌ ರಾವ್‌, ಪ್ರಶಾಂತ್ ಉಪಾಧ್ಯಾಯ, ಪ್ರಾಣ್‌ ಹೆಗಡೆ, ಗಿರಿಧರ ಕಾಮತ್‌ ಗ್ರೀಸ್‌ನ ಕೋಸ್ಟಾ ಮತ್ತಿತರರಿದ್ದರು.

ಗಾಳಿಪಟ ಉತ್ಸವಕ್ಕೆ ಆಹ್ವಾನಿಸುತ್ತಿದೆ ಜಂಭದ ಕೋಳಿ!

ಈ ಬಾರಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಪೋಸ್ಟರ್‌ನಲ್ಲಿ ಕರಾವಳಿಯ ಜಂಭದ ಕೋಳಿ ಆಹ್ವಾನ ನೀಡುವುದನ್ನು ಚಿತ್ರಿಸಲಾಗಿದೆ.

ಕೋಳಿಗಳ ಜಾತಿಯಲ್ಲಿ ಜಂಭದ ಕೋಳಿಗೆ ಅದರದ್ದೇ ಆದ ಸ್ಥಾನ ಇದೆ. ತುಳುವರಲ್ಲಿ ಒರಿಯೇ ಹೆಸರಿನ ಈ ಕೋಳಿ ತನ್ನದೇ ಗತ್ತುಗಾರಿಕೆ ಹೊಂದಿದೆ. ಹಾಗಾಗಿ ಟೀಂ ಇಂಡಿಯಾ ತಂಡ ಕಳೆದ ಏಳು ವರ್ಷಗಳಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಚರಿಸುತ್ತಿದೆಯಲ್ಲದೆ, ತಾನೂ ಇತರೆ ದೇಶಗಳಿಗೆ ತೆರಳಿ ಗಾಳಿಪಟ ಹಾರಾಟ ನಡೆಸಿದ ಹೆಗ್ಗಳಿಕೆ ಹೊಂದಿದೆ. ಜಂಭದ ಕೋಳಿಯ ಮೂಲಕ ಎಲ್ಲರಿಗೂ ಗಾಳಿಪಟ ಉತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡುವುದನ್ನು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ‘ಎಲ್ಲರನ್ನೂ ಪ್ರೀತಿಯಿಂದ ಎದುರುಗೊಳ್ಳುತ್ತೇನೆ’ ಎಂದು ತುಳು ಭಾಷೆಯಲ್ಲಿ ಬರೆಯಲಾಗಿದೆ.

ಪ್ರತಿ ವರ್ಷ ಮಂಗಳೂರು ಗಾಳಿಪಟ ಉತ್ಸವಕ್ಕೆ ಕಾಯುತ್ತಿರುತ್ತೇನೆ. ಈ ಬಾರಿ ಕೇರಳದ ಕಥಕ್ಕಳಿಯ ನೂರು ಚಿತ್ರವನ್ನು ಒಂದೇ ದಾರದಲ್ಲಿ ಪೋಣಿಸಿ ಹಾರಾಟ ನಡೆಸಲಾಗುತ್ತಿರುವುದು ವಿಶೇಷ. ಕ್ರಿಕೆಟ್‌ಗೆ ಕೋಲ್ಕತ್ತಾ ಸ್ಟೇಡಿಯಂ ಹೊಂದಿಕೆಯಾಗುವಂತೆ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ಬೀಚ್‌ ಪ್ರಸಿದ್ಧಿಯಾಗಿದೆ.

-ಅಶೋಕ್ ಶಾ, ದಾಬೋಲಿ. ಗಾಳಿಪಟ ಹಾರಾಟಗಾರಎರಡು ದಾರಗಳ ಮೂಲಕ ಗಾಳಿಪಟನ್ನು ವಿಶಿಷ್ಟ ರೀತಿಯಲ್ಲಿ ಹಾರಿಸಲಾಗುತ್ತದೆ. ಸ್ಟಂಟ್‌ ಹೆಸರಿನಲ್ಲಿ ಈ ಗಾಳಿಪಟ ಹಾರಾಟ ನಡೆಸಲಿದೆ. ನಾನಾ ಕಡೆಗಳಲ್ಲಿ 60ಕ್ಕೂ ಅಧಿಕ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದ್ದೇನೆ, ಮಂಗಳೂರಿನಂತಹ ಪ್ರಶಸ್ತ ಸ್ಥಳ ಬೇರೆಲ್ಲೂ ನೋಡಿಲ್ಲ.

-ಕೋಸ್ಟಾ, ಗಾಳಿಪಟ ಹಾರಾಟಗಾರ, ಗ್ರೀಸ್‌.

-----------------