ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮ ಮಕ್ಕಳಿಗೆ ವರದಾನ: ಮನ್ಮುಲ್ ನಿರ್ದೇಶಕ ಡಾಲುರವಿ

| Published : Oct 07 2024, 01:32 AM IST

ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮ ಮಕ್ಕಳಿಗೆ ವರದಾನ: ಮನ್ಮುಲ್ ನಿರ್ದೇಶಕ ಡಾಲುರವಿ
Share this Article
  • FB
  • TW
  • Linkdin
  • Email

ಸಾರಾಂಶ

ವಾದ ಮಂಡಿಸುವುದರಿಂದ ಮಕ್ಕಳಲ್ಲಿ ವ್ಯಕ್ತಿತ್ವವು ಸಮಗ್ರ ವಿಕಸನವಾಗುವ ಜೊತೆಗೆ ತಮ್ಮಲ್ಲಿ ಸುಪ್ತ ಪ್ರತಿಭೆಯು ಮಾತಿನ ಮೂಲಕ ಹೊರ ಚೆಲ್ಲುವ, ಅಭಿವ್ಯಕ್ತಿ ಅನಾವರಣಗೊಳ್ಳುವ ಮೂಲಕ ಸಾಧನೆ ಹಾದಿಯಲ್ಲಿ ಮುನ್ನಡೆಯಲು ನೆರವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ವಿಕಸನ ಹಾಗೂ ಸೃಜನಶೀಲತೆಗೆ ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮ ವರದಾನವಾಗಿದೆ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಬಹುಮಾನ ಪಡೆದ ಬಿಜಿಎಸ್‌ನ ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಪಾರಿತೋಷಕ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾತನಾಡುವ ಅಭಿವ್ಯಕ್ತಿಯನ್ನು ಹೆಚ್ಚಿಸಿ ಲೋಕಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಈ ಕಾರ್ಯಕ್ರಮವು ನಾಡಿನಾದ್ಯಂತ ಹೆಚ್ಚು ಜನಪ್ರಿಯವಾಗುತ್ತಿದೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಲೋಕಜ್ಞಾನದ ಬಗ್ಗೆ ಅರಿವು ಮೂಡಿಸಿ ಮಾತನಾಡುವ ಸಾಮರ್ಥ್ಯ ಹೆಚ್ಚಿಸುವ ಹರಟೆ ಕಾರ್ಯಕ್ರಮದಲ್ಲಿ ವಿಚಾರಗಳ ಬಗ್ಗೆ ಪರ ಹಾಗೂ ವಿರೋಧವಾಗಿ ಮಾತನಾಡಿ, ವಾದ ಮಂಡಿಸುವುದರಿಂದ ಮಕ್ಕಳಲ್ಲಿ ವ್ಯಕ್ತಿತ್ವವು ಸಮಗ್ರ ವಿಕಸನವಾಗುವ ಜೊತೆಗೆ ತಮ್ಮಲ್ಲಿ ಸುಪ್ತ ಪ್ರತಿಭೆಯು ಮಾತಿನ ಮೂಲಕ ಹೊರ ಚೆಲ್ಲುವ, ಅಭಿವ್ಯಕ್ತಿ ಅನಾವರಣಗೊಳ್ಳುವ ಮೂಲಕ ಸಾಧನೆ ಹಾದಿಯಲ್ಲಿ ಮುನ್ನಡೆಯಲು ನೆರವಾಗುತ್ತದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಜಾನಕೀರಾಂ ಮಾತನಾಡಿ, ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮವು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ದಾರಿದೀಪವಾಗಿದೆ. ಹಾದಿ ತಪ್ಪುತ್ತಿರುವ ಮಕ್ಕಳನ್ನು ಸರಿದಾರಿಗೆ ತಂದು ಸಾಧನೆ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಲು ವರವಾಗಿದೆ ಎಂದರು.

ಹಿರಿಯ ಪತ್ರಕರ್ತರಾದ ಎಂ.ಕೆ.ಹರಿಚರಣ ತಿಲಕ್, ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಹಾಗೂ ಮೇನಾಗರ ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೇಮಗಿರಿ ಶಾಖಾಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.

ನಂತರ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್(ಪ್ರಥಮ), ಪಾಂಡವಪುರ ಬಿಜಿಎಸ್ ಸ್ಕೂಲ್(ದ್ವಿತೀಯ) ಹಾಗೂ ಕೃಷ್ಣರಾಜಪೇಟೆಯ ಬಿಜಿಎಸ್ ಸ್ಕೂಲ್ (ತೃತೀಯ) ಬಹುಮಾನ ಪಡೆದುಕೊಂಡು ಪಾರಿತೋಷಕವನ್ನು ಪಡೆದುಕೊಂಡರೆ ಅನುದಾನಿತ ಶಾಲೆಗಳ ವತಿಯಿಂದ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕೂಡಲಗಿ ಗುರು ಶ್ರೀ.ಬಾಲಗಂಗಾಧರನಾಥಸ್ವಾಮೀಜಿ ಪ್ರೌಢಶಾಲೆ(ಪ್ರಥಮ), ಆನೆಗೊಳ ಆದಿಚುಂಚನಗಿರಿ ಶಾಲೆ(ದ್ವಿತೀಯ) ಹಾಗೂ ನಾಗಮಂಗಲ ತಾಲೂಕಿನ ಜಿ.ಬೊಮ್ಮನಹಳ್ಳಿಯ ಶ್ರೀ ವಿಶ್ವೇಶ್ವರಯ್ಯ ಪ್ರೌಢಶಾಲೆಯು(ತೃತೀಯ) ಸ್ಥಾನಪಡೆದು ಮೇಲ್ಕಂಡ ಎಲ್ಲಾ ಶಾಲೆಗಳ ಮುಖ್ಯಸ್ಥರು ಪಾರಿತೋಷಕ ಪಡೆದುಕೊಂಡರು.