ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು/ ಬೆಳ್ತಂಗಡಿ‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ, ಇದರಿಂದ ನನಗೀಗ ಪಶ್ಚಾತ್ತಾಪವಾಗುತ್ತಿದೆ. ಹೀಗಾಗಿ, ಸತ್ಯ ಬಿಚ್ಚಿಡುತ್ತಿದ್ದೇನೆ’ ಎಂದು ಈ ಹಿಂದೆ ‘ಪಶ್ಚಾತ್ತಾಪ’ದ ಕಥೆ ಕಟ್ಟಿದ್ದ ಬುರುಡೆ ಕೇಸ್‌ನ ಆರೋಪಿ ಚಿನ್ನಯ್ಯ, ಇದೀಗ ತಾನು ಮಾಡಿದ ಸುಳ್ಳು ಆರೋಪಕ್ಕೆ‘ಪಶ್ಚಾತ್ತಾಪ'''''''' ಪಡುತ್ತಿದ್ದಾನೆ. ಪ್ರಕರಣದ ವಿಚಾರಣೆ ವೇಳೆ ಏನೇ ಪ್ರಶ್ನೆ ಕೇಳಿದರೂ ಕಣ್ಣೀರು ಹಾಕುತ್ತಿದ್ದು, ‘ಇಷ್ಟೆಲ್ಲಾ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ, ಸರ್ ನನ್ನ ಬಿಟ್ಟು ಬಿಡಿ’ ಎಂದು ಗೋಗರೆಯುತ್ತಿದ್ದಾನೆ.
ಬುಧವಾರ ಆತನ ಪೊಲೀಸ್ ಕಸ್ಟಡಿ ಮುಗಿದಿತ್ತು. ಹೀಗಾಗಿ, ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್‌ನಲ್ಲಿಯೂ ಆತ ಕಣ್ಣೀರು ಹಾಕಿದ್ದ ಎಂದು ತಿಳಿದು ಬಂದಿದೆ. ಬಳಿಕ, ಕೋರ್ಟ್ ಹೊರಗೂ ಕಣ್ಣೀರು ಹಾಕಿದ್ದ. ಮತ್ತೆ ಮೂರು ದಿನ ಪೊಲೀಸ್ ಕಸ್ಟಡಿ ಲಭಿಸಿರುವ ಹಿನ್ನೆಲೆಯಲ್ಲಿ ಆರೋಪಿ ಚಿನ್ನಯ್ಯನನ್ನು ಗುರುವಾರ ಎಸ್‌ಐಟಿ ಕಸ್ಟಡಿಯಲ್ಲೇ ಹೆಚ್ಚಿನ ವಿಚಾರಣೆ ನಡೆಸಲಾಯಿತು. ಗುರುವಾರದ ವಿಚಾರಣೆ ವೇಳೆಯೂ ಆತ ಮತ್ತೆ ಕಣ್ಣೀರು ಹಾಕಿದ್ದಾನೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿದೆ. ಸೂತ್ರದಾರರು ಹೇಳಿದಂತೆ ತಪ್ಪು ಮಾಡಿದ್ದೇನೆ. ಇನ್ನು ನನಗೆ ಯಾರಿದ್ದಾರೆ ಎಂದು ಅತ್ತಿದ್ದಾನೆ. ಈ ಹಿಂದೆ ನನ್ನೊಂದಿಗೆ ಇದ್ದ ವಕೀಲರ ಮೇಲೆ ಈಗ ನನಗೆ ಭರವಸೆ ಉಳಿದಿಲ್ಲ ಎಂದು ಚಿನ್ನಯ್ಯ ವಿಚಾರಣೆ ವೇಳೆ ಬೇಸರ ವ್ಯಕ್ತಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.ಲೈಕ್ಸ್‌ಗಾಗಿ ಸುಳ್ಳು ವಿಡಿಯೋ ಹಾಕಿದ್ದ ಯುಟ್ಯೂಬರ್ ಅಭಿಷೇಕ್?ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಹಾಗೂ ಸುಜಾತ ಭಟ್ ಕೇಸಿನ ಬಗ್ಗೆ ಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹರಿಯಬಿಟ್ಟಿದ್ದ ಎನ್ನುವ ಆರೋಪದ ಮೇಲೆ ಯುನೈಟೆಡ್ ಮೀಡಿಯಾದ ಯೂಟ್ಯೂಬರ್ ಅಭಿಷೇಕ್‌ನನ್ನು ಎಸ್‌ಐಟಿ 2ನೇ ದಿನವೂ ತೀವ್ರ ವಿಚಾರಣೆಗೆ ಒಳಪಡಿಸಿತು. ಬೆಳ್ತಂಗಡಿ ಕಚೇರಿಯಲ್ಲಿ ಬುಧವಾರ ತಡರಾತ್ರಿ 2.30ವರೆಗೆ ವಿಚಾರಣೆ ನಡೆಸಿ, ಬಳಿಕ ಗುರುವಾರ ದಿನಪೂರ್ತಿ ಆತನಿಗೆ ಗ್ರಿಲ್ ಮಾಡಲಾಯಿತು. ವಿಚಾರಣೆ ವೇಳೆ, ‘ನಾನು ಲೈಕ್ ಮತ್ತು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದೇನೆ’ ಎಂದು ಆತ ಕಣ್ಣೀರು ಹಾಕಿದ್ದಾನೆ ಎನ್ನಲಾಗಿದೆ.ಶವ ಶೋಧ ಪ್ರಕರಣದ ಕೆಲವು ಸ್ಪಾಟ್‌ಗಳಲ್ಲಿ ಅಭಿಷೇಕ್ ಕೈವಾಡ ಇರುವ ಕುರಿತು, ಚಿನ್ನಯ್ಯ ಪಾಯಿಂಟ್‌ಗಳನ್ನು ಗುರುತಿಸುವ ಮೊದಲು ಆ ಸ್ಥಳದಲ್ಲಿ ಈತ ಓಡಾಡಿದ್ದ ಎನ್ನಲಾಗಿದೆ. ಬಂಗ್ಲೆಗುಡ್ಡೆ ಪರಿಸರದಲ್ಲಿ ಭೂಮಿಯ ಮೇಲೆ ಕಳೇಬರ ಕಂಡಿದ್ದು, ಅದರ ವಿಡಿಯೋ ಮಾಡಿ ಚಿನ್ನಯ್ಯ ಮತ್ತು ತಂಡಕ್ಕೆ ನೀಡಿದ ಸಂಶಯದ ಮೇಲೆ ಅಭಿಷೇಕ್‌ನ ವಿಚಾರಣೆ ನಡೆಸಲಾಗಿದೆ.
ಅಭಿಷೇಕ್‌ಗೆ ಸುಜಾತ ಭಟ್ ಜೊತೆ ನಂಟಿರುವ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ನಾಲ್ಕೈದು ತಿಂಗಳ ಹಿಂದೆ ಸುಜಾತರ ಸಂದರ್ಶನವನ್ನು ಅಭಿಷೇಕ್ ನಡೆಸಿದ್ದ. ಬಳಿಕ, ಅವರು ಸಾರ್ವಜನಿಕವಾಗಿ ಚರ್ಚೆಗೆ ಇಳಿದಿದ್ದರು ಎಂಬ ಕಾರಣವನ್ನು ಮುಂದಿಟ್ಟು ಎಸ್‌ಐಟಿ ವಿಚಾರಣೆ ನಡೆಸಿದೆ.ಇದಲ್ಲದೆ, ಗಿರೀಶ್ ಮಟ್ಟಣ್ಣವರ್ ಅವರನ್ನು ಹಲವು ತಿಂಗಳ ಹಿಂದೆಯೇ ಈತ ಸಂಪರ್ಕಿಸಿದ್ದ. ತನ್ನ ವಿಚಾರಣೆ ವೇಳೆ ಚಿನ್ನಯ್ಯ ಕೂಡ ಯೂಟ್ಯೂಬರ್ ಅಭಿಷೇಕ್ ಹೆಸರನ್ನು ಉಲ್ಲೇಖಿಸಿದ್ದ. ಹೀಗಾಗಿ, ಈ ಎಲ್ಲ ಆಯಾಮಗಳಲ್ಲಿ ಅಭಿಷೇಕ್‌ನ ಸುದೀರ್ಘ ವಿಚಾರಣೆ ನಡೆಸಲಾಗಿದೆ.ಯುಟ್ಯೂಬರ್ ಸಮೀರ್ ಮನೆ ಮೇಲೆ ಪೊಲೀಸ್ ದಾಳಿ:ಬೆಳ್ತಂಗಡಿ ಪೊಲೀಸರು ಗುರುವಾರ ಯುಟ್ಯೂಬರ್ ಸಮೀರ್ ಅವರ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದ ಮೇಲೆ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬುಧವಾರ ಬೆಳ್ತಂಗಡಿ ನ್ಯಾಯಾಲಯ ಹೊರಡಿಸಿದ ಸರ್ಚ್ ವಾರಂಟ್ ಅಡಿಯಲ್ಲಿ ಗುರುವಾರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು.ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ, ಎಫ್ಎಸ್ಎಲ್ ವಿಭಾಗದ ಸೋಕೊ ಸಿಬ್ಬಂದಿ ಜೊತೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಹುಲ್ಲಹಳ್ಳಿಯಲ್ಲಿರುವ ಆತನ ಬಾಡಿಗೆ ಮನೆಗೆ ಭೇಟಿ ನೀಡಿ, ಮಹಜರು ನಡೆಸಿದರು. ಪೊಲೀಸರು ಮುಂಚಿತವಾಗಿಯೇ ಸಮೀರ್‌ಗೆ ಮಹಜರು ಪ್ರಕ್ರಿಯೆಗೆ ಆಗಮಿಸುವುದಾಗಿ ಮಾಹಿತಿ ನೀಡಿದ್ದರು. ಹೀಗಾಗಿ, ಆತ ಮನೆಯಲ್ಲಿಯೇ ಇದ್ದ. ಜೊತೆಗೆ, ಗಿರೀಶ್ ಮಟ್ಟಣ್ಣವರ್ ಕೂಡ ಇದ್ದರು. ಸ್ಥಳ ಮಹಜರು ನಡೆಸಿದ ಪೊಲೀಸರು, ಅದರ ವಿಡಿಯೋ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮನೆಯಿಂದ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ ತೆರಳಿದರು.ನಂತರ ಗಿರೀಶ್ ಮಟ್ಟಣ್ಣವರ್ ಮಾತನಾಡಿ, ಇದು ಪೊಲೀಸ್ ರೇಡ್ ಅಲ್ಲ. ಧರ್ಮಸ್ಥಳ ಕೇಸ್‌ನ ವಿಚಾರಣೆಯೂ ಅಲ್ಲ. ‘ಧರ್ಮಸ್ಥಳ ದಣಿಗಳ ಚಾಟೂ (ಗುಲಾಮರು)ಗಳು’ ಎಂದು ಎಐ ವಿಡಿಯೋದಲ್ಲಿ ಬಳಸಿದ ಒಂದು ಶಬ್ದವನ್ನು ಉಲ್ಲೇಖಿಸಿ ಬೆಳ್ತಂಗಡಿ ಪೊಲೀಸರು ಉದ್ದೇಶಪೂರ್ವಕವಾಗಿ ಸುಮೋಟೋ ಕೇಸ್ ದಾಖಲು ಮಾಡಿಕೊಂಡಿದ್ದರು. ಆ ಕೇಸ್‌ನ ಸಂಬಂಧ ಸ್ಥಳ ಮಹಜರು ಮಾಡಿದ್ದಾರೆ ಎಂದರು. ಆದರೆ, ಸಮೀರ್ ಯಾವುದೇ ಪ್ರತಿಕ್ರಿಯೆ ನೀಡದೆ, ಮಟ್ಟಣ್ಣವರ್ ಜೊತೆಗೆ ಹೊರಟು ಹೋದರು.