ಚಿಂತಾಮಣಿ ನಗರ ಯಶಸ್ವಿ ಬಂದ್‌

| Published : May 23 2025, 01:12 AM IST

ಸಾರಾಂಶ

ಬಂದ್‌ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಿದರು, ಸರ್ಕಾರಿ ಕಚಿರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಜನರೇ ಇರಲಿಲ್ಲ. ಬಸ್‌ಗಳ ಸಂಚಾರವೂ ಕಡಿಮೆ ಇತ್ತು. ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಬೈಕ್‌ ರಾಲಿ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ ಪುತ್ಥಳಿಯನ್ನು ರಾತ್ರೋ ರಾತ್ರಿ ತಾಲೂಕು ಆಡಳಿತ ತೆರವುಗೊಳಿಸಿರುವುದನ್ನು ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಚಿಂತಾಮಣಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರತಿಭಟನಾಕಾರರನ್ನು ಬಂಧಿಸಿರುವ ಪೊಲೀಸರ ನಡೆ ಖಂಡಿಸಿ ವಿನೋಭಾಕಾಲೋನಿ ಮಹಿಳೆಯರು ಪೊಲೀಸ್ ಜೀಪ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಬೈಕ್‌ ರ್‍ಯಾಲಿ: ಹಲವರ ಬಂಧನ

ಬಂದ್‌ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಿದರು, ಸರ್ಕಾರಿ ಕಚಿರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಜನರೇ ಇರಲಿಲ್ಲ. ಬಸ್‌ಗಳ ಸಂಚಾರವೂ ಕಡಿಮೆ ಇತ್ತು. ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ೬ ಗಂಟೆಯಿಂದಲೇ ನಗರ ಹಲವು ವೃತ್ತಗಳಲ್ಲಿ ಶಾಂತಿಯುತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‌ ರ್‍ಯಾಲಿ ಮುಖಾಂತರ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರ ವಾಹನಗಳನ್ನು ತಡೆದು ಹಲವರನ್ನು ಬಂಧಿಸಿದರು.

ವಿನೋಭಾ ಕಾಲೋನಿಯಲ್ಲಿ ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ವಿನೋಭಾ ಕಾಲೋನಿಯ ಮಹಿಳೆಯರು ಮಕ್ಕಳು ಪೊಲೀಸ್ ಜೀಪ್‌ಗಳನ್ನು ತಡೆದು ಪ್ರತಿಭಟನೆ ಮಾಡಲು ಮುಂದಾದಾಗ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಮತ್ತು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ತಪಥೇಶ್ವರ ಕಾಲೋನಿಯ ಮಹಿಳೆಯರು ಸಹ ಕೋಲಾರ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ತಮ್ಮ ಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಬಳಿಕ ಬಂಧಿತರನ್ನು ಬಿಡುಗಡೆ ಮಾಡಲಾಯಿತು.ಸಚಿವ ಡಾ. ಸುಧಾಕರ್ ವಿರುದ್ಧ ಆಕ್ರೋಶ

ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ದ ಧಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೊಲೀಸರು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋ ರಾತ್ರಿ ತೆರುವುಗೊಳಿಸಿ ಅಂಬೇಡ್ಕರ್‌ರಿಗೆ ಅಪಮಾನ ಮಾಡಿರುವುದು ಅವರಿಗೆ ಶೋಭೆತರುವುದಿಲ್ಲವೆಂದು ಅವರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಚಿಂತಾಮಣಿಯಲ್ಲಿ ಸಚಿವ ಡಾ.ಸುಧಾಕರ್‌ ವಿರುದ್ಧ ನಡೆದ ಮೊದಲ ಪ್ರತಿಭಟನೆ ಿದು ಎನ್ನಲಾಗಿದೆ.

ನಗರದಲ್ಲಿ ವ್ಯಾಪಾರವಹಿವಾಟು ಬಂದಾಗಿದ್ದರೂ ವಾಹನ ಸಂಚಾರ ಮಾತ್ರ ಎಂದಿನಂತ್ತಿತ್ತು. ಚಿಂತಾಮಣಿ ಬಂದ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಜಗನ್ನಾಥ್ ರೈ, ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳೀಧರ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.