ಸೋಲಿಗರಿಗೆ ಕಳಪೆ ಆಹಾರ ಪದಾರ್ಥ ವಿತರಣೆ

| Published : May 23 2025, 01:08 AM IST

ಸಾರಾಂಶ

ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಇಲಾಖೆಯ ವತಿಯಿಂದ ನೀಡಲಾಗಿರುವ ಆಹಾರ ಪದಾರ್ಥಗಳು, ಅಡುಗೆ ಎಣ್ಣೆ ದುರ್ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ತೋರಿಸುತ್ತಿರುವುದು.

ಜಿ.ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಸೋಲಿಗ ಸಮುದಾಯಕ್ಕೆ ನೀಡಿರುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದ್ದಾಗಿದೆ. ತಾಲೂಕಿನಲ್ಲಿರುವ 4000 ಸೋಲಿಗ ಸಮುದಾಯ ಕುಟುಂಬಗಳಿಗೆ 90 ಕಡೆ ಸರ್ಕಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೂಲಕ ನೀಡುತ್ತಿರುವ ಆಹಾರ ಪದಾರ್ಥಗಳು ಸರ್ಕಾರದ ಯೋಜನೆಯಂತೆ ನೀಡದೆ ಕಳಪೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಸೋಲಿಗ ಸಮುದಾಯದ ಅರಣ್ಯದ ಪ್ರದೇಶದಲ್ಲಿ ವಾಸಿಸುವ ಜನತೆಗೆ ಕಾಣಿಸಿಕೊಳ್ಳುವ ಕುಡುಗೋಲು ರಕ್ಷಣಾ ಕಾಯಿಲೆ ತಡೆಗಟ್ಟಲು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರ್ಕಾರ ವಿತರಿಸುತ್ತಿದೆ. ಆದರೆ, ಕಳಪೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿರುವುದರಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ ಎಂದು ಎಂದು ಪೊನ್ನಾಚಿ ಗ್ರಾಮ ಹಾಗೂ ರಾಮೇಗೌಡನ ಹಳ್ಳಿ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅವಧಿ ಮೀರಿದ ಆಹಾರ ಪದಾರ್ಥ ವಿತರಣೆ:

ವಿತರಣೆಯಾಗಿರುವ 8 ಕೆಜಿ ರಾಗಿ, 3 ಕೆಜಿ ತೊಗರಿಬೇಳೆ, ಎಣ್ಣೆ ಒಂದು ಕೆಜಿ ಮತ್ತು ಕಡಲೆ, ಕಡ್ಲೆಬೇಳೆ ಇನ್ನಿತರ ಆಹಾರ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅವಧಿ ಮೀರಿರುವ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗಿದೆ. ನೀಡಿರುವ ಫ್ರೀ ಡ್ರಾಪ್‌ ಅಡುಗೆ ಎಣ್ಣೆ ಸಹ ದುರ್ವಾಸನೆ ಬೀರುತ್ತಿದ್ದು ಇದನ್ನು ಅಡುಗೆಗೆ ಬಳಸಿ ಊಟ ಮಾಡಿದ ಸೋಲಿಗ ಸಮುದಾಯದ ಜನತೆಗೆ ಭೇದಿ, ವಾಂತಿ ಇನ್ನಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಡುಗೆ ಎಣ್ಣೆಯಲ್ಲಿ ಐಎಸ್‌ಐ ಅಗ್‌ಮಾರ್ಕ ಇಲ್ಲದಿದ್ದರೂ ಸರಬರಾಜು ಮಾಡಿದ್ದಾರೆ. ಸುರಕ್ಷಿತ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸೋಲಿಗ ಸಮುದಾಯ ಕುಟುಂಬಗಳಿಗೆ ಸರಬರಾಜು ಮಾಡಬೇಕು ಎಂದು ನಿವಾಸಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕ್ರಮಕ್ಕೆ ಒತ್ತಾಯ:

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಸೋಲಿಗ ಸಮುದಾಯದ ಕುಟುಂಬಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳು ಸಂಪೂರ್ಣ ಅವಧಿ ಮೀರಿರುವ ಪದಾರ್ಥಗಳ ಮತ್ತು ದುರ್ವಾಸನೆ ಬೀರುವ ಅಡುಗೆ ಎಣ್ಣೆಯನ್ನು ಸರಬರಾಜು ಮಾಡಿರುವ ಗುತ್ತಿಗೆದಾರರ ಮೇಲೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸೋಲಿಗ ಸಮುದಾಯದ ನಿವಾಸಿಗಳು ಒತ್ತಾಯಿಸಿದ್ದಾರೆ.

ಸರ್ಕಾರ ಸೋಲಿಗ ಸಮುದಾಯದ ಜನತೆಗೆ ಕುಡುಗೋಲು ರಕ್ಷಣಾ ಕಾಯಿಲೆ ತಡೆಗಟ್ಟಲು ಕೆಂಪು ರಕ್ತ ಕಣಗಳ ವೃದ್ಧಿಗೆ ನೀಡುತ್ತಿರುವ ಪದಾರ್ಥಗಳು ತಿಂದು ವಾಂತಿ, ಭೇದಿ ಹೊಟ್ಟೆ ನೋವು ಇನ್ನಿತರ ಕಾಯಿಲೆಗಳಿಗೆ ತುತ್ತಾಗಿರುವ ಜನತೆಗೆ ಸೂಕ್ತ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು. ಅವಧಿ ಮೀರಿರುವ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಮಾದಯ್ಯ, ರಾಮೇಗೌಡನಹಳ್ಳಿ ಸೋಲಿಗ ಸಮುದಾಯ ಮುಖಂಡ

ಫೆಬ್ರವರಿ ತಿಂಗಳವರೆಗೆ ಜಿಲ್ಲೆಯಲ್ಲಿಯೇ ಟೆಂಡರ್ ಮೂಲಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗಿತ್ತು. ಆದರೆ, ಈ ತಿಂಗಳು ರಾಜ್ಯಮಟ್ಟದಿಂದ ಆರ್‌ಆರ್ ಟೆಂಡರ್ ಮೂಲಕ 8159 ಕುಟುಂಬಗಳಿಗೆ ಜಿಲ್ಲೆಯಲ್ಲಿ ನೀಡಲಾಗಿದೆ. ಇದರಿಂದಾಗಿ ಎಲ್ಲ ಕಡೆ ಎಣ್ಣೆಯಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದಿದೆ. ರಾಜ್ಯ ಮಟ್ಟದ ಅಧಿಕಾರಿ, ಸೆಕ್ರೆಟರಿ ಗಮನಕ್ಕೆ ತರಲಾಗಿದೆ. ಆಹಾರ ಪದಾರ್ಥಗಳನ್ನು ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು.

ಬಿಂದ್ಯಾ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ