ಬದುಕು ಸಾರ್ಥಕ ಮಾಡಿಕೊಂಡವರು ಚಿರಂಜೀವಿ: ಎಂ.ಎಲ್.ಮೂರ್ತಿ

| Published : Dec 28 2024, 12:45 AM IST

ಬದುಕು ಸಾರ್ಥಕ ಮಾಡಿಕೊಂಡವರು ಚಿರಂಜೀವಿ: ಎಂ.ಎಲ್.ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ತನ್ನ ಬದುಕನ್ನು ಯಾರು ಸಾರ್ಥಕ ಮಾಡಿಕೊಂಡಿರುತ್ತಾರೋ ಅವರು ಚಿರಂಜೀವಿಯಾಗಿರುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.

- ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಡಾ. ಮನಮೋಹನ್‌ ಸಿಂಗ್‌ ಶ್ರದ್ಧಾಂಜಲಿ ಸಭೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತನ್ನ ಬದುಕನ್ನು ಯಾರು ಸಾರ್ಥಕ ಮಾಡಿಕೊಂಡಿರುತ್ತಾರೋ ಅವರು ಚಿರಂಜೀವಿಯಾಗಿರುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ನಿಂದ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಹಿರಿಯ ರಾಜಕಾರಣಿ, ಮುತ್ಸದ್ಧಿ, ಆರ್ಥಿಕ ತಜ್ಞ, 10 ವರ್ಷಗಳ ಕಾಲ ಸುಧೀರ್ಘವಾಗಿ ದೇಶವನ್ನು ಮುನ್ನಡೆಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಭಾರತದ ಹಣಕಾಸು ನೀತಿ ಮೆಚ್ಚಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಡಾ.ಮನಮೋಹನ್ ಸಿಂಗ್ ಅವರ ಸಲಹೆ ಪಡೆದಿರುವುದು ಇತಿಹಾಸ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆದ ಸಂದರ್ಭದಲ್ಲಿ ದೇಶದಲ್ಲಿ ಉತ್ತಮ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳು ಇಂದು ಮನೆ ಮಾತಾಗಿ ಅಚ್ಚಳಿಯದೆ ಉಳಿದಿವೆ ಎಂದು ಹೇಳಿದರು.ದೇಶದ ಎಲ್ಲರಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಸರ್ವ ಶಿಕ್ಷಣಾ ಅಭಿಯಾನವನ್ನು ಜಾರಿಗೆ ತಂದರು. ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆ ತರುವಲ್ಲಿ ಡಾ.ಮನಮೋಹನ್ ಸಿಂಗ್ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಡಾ.ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ಮುಖಂಡರೊಂದಿಗೆ ದೇಶದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಉತ್ತಮ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಟ್ಟಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿರುವುದು ನಾವೆಲ್ಲರೂ ಕಂಡಿದ್ದೇವೆ ಎಂದರು.ಡಾ.ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ನಗರಸಭೆ ಸದಸ್ಯ ಪ್ರಕಾಶ್ ರೈ, ಸಿಡಿಎ ಸದಸ್ಯರಾದ ಶೃದೀಪ್, ರಾಘವೇಂದ್ರ, ನಗರ ಆಶ್ರಯ ಸಮಿತಿ ಸದಸ್ಯ ಪ್ರಸಾದ್ ಅಮಿನ್, ಕೆಪಿಸಿಸಿ ಎಸ್.ಸಿ ಘಟಕ ರಾಜ್ಯ ಸಂಚಾಲಕಿ ನೇತ್ರಾವತಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಮಂತ್, ಕಿಸಾನ್ ಘಟಕದ ಮಧು, ಕೆಡಿಪಿ ಸದಸ್ಯ ಸಂತೋಷ್, ಮುಖಂಡರಾದ ಮಂಜುನಾಥ್, ಎಚ್.ಎಸ್.ಜಗದೀಶ್, ಸುರೇಶ್, ನೂರಿ, ಕುಸುಮಾ ಭರತ್, ಶಬುದ್ದೀನ್, ಉಮೇಶ್ ಶೆಟ್ಟಿ, ಜಗದೀಶ್ ಗೌಡ ಉಪಸ್ಥಿತರಿದ್ದರು. 27 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.