ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು ಎಚ್‍ಡಿಎಫ್‍ಸಿ ಬ್ಯಾಂಕ್ ಸಿಎಸ್ಆರ್ ನಿಧಿಯಡಿ 1.80 ಕೋಟಿ ರು. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದೇಣಿಗೆ ಕೊಟ್ಟಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಸ್ಪತ್ರೆ ಆವರಣದಲ್ಲಿ 114 ಕೋಟಿ ರು. ವೆಚ್ಚದಲ್ಲಿ 180 ಹಾಸಿಗೆಗಳ ಸುಸಜ್ಜಿತ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ 5 ಕೋಟಿ ರು. ವೆಚ್ಚದ ‘ಕ್ರಿಟಿಕಲ್ ಕೇರ್ ಬ್ಲಾಕ್’ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ಮೂರು ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯ ಮಾದರಿಯಲ್ಲಿಯೇ 1.05 ಕೋಟಿ ರು. ವೆಚ್ಚದಲ್ಲಿ ‘ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬೊರೇಟರಿ’ ಸ್ಥಾಪಿಸಲಾಗಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಎಚ್‍ಡಿಎಫ್‍ಸಿ ಬ್ಯಾಂಕ್ ಸಿಎಸ್ಆರ್ ನಿಧಿಯಡಿ 100 ಫೌಲರ್ಸ್ ಕಾಟ್‍ಗಳು, ಬೆಡ್ ಸೈಡ್ ಲಾಕರ್‌ಗಳು, ತಲಾ 10 ಸಂಖ್ಯೆಯ ಸಿ-ಪ್ಯಾಪ್ ಯಂತ್ರಗಳು, ಮಾನಿಟರ್‌ಗಳು, ಇಸಿಜಿ ಯಂತ್ರಗಳು, ಬೇಬಿ ವಾರ್ಮರ್ ಹಾಗೂ ಫೋಟೋಥೆರಪಿ ಹಾಗೂ 28 ಲಕ್ಷ ರು. ಮೌಲ್ಯದ ತಲಾ ಎರಡು ಅತ್ಯಾಧುನಿಕ ಅರಿವಳಿಕೆ ಯಂತ್ರಗಳನ್ನು ಜಿಲ್ಲಾಸ್ಪತ್ರೆಗೆ ನೀಡಿದೆ. ಶೀಘ್ರವೇ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದಾಗಿ ತಿಳಿಸಿದರು.30 ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಉಪಕರಣಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಲ್ಯಾಬ್‍ನಲ್ಲಿ ಒಂದೇ ಬಾರಿಗೆ 240 ರಿಂದ 400 ಟೆಸ್ಟ್ ಗಳನ್ನು ನಡೆಸಬಹುದು. ಕಿಡ್ನಿ, ಲಿವರ್ ಹಾಗೂ ಹೃದಯ ಸಂಬಂಧಿ ಪರೀಕ್ಷೆಗಳ ವರದಿಗಳು ಇನ್ನೂ ಮುಂದೆ ಅತ್ಯಂತ ವೇಗವಾಗಿ ರೋಗಿಗಳಿಗೆ ತಲುಪಿಸಲಾಗುವುದು. 50 ಲಕ್ಷ ರು. ವೆಚ್ಚದಲ್ಲಿ ಉದರದರ್ಶಕ (ಎಂಡೋಸ್ಕೋಪಿ) ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದು ಅನ್ನನಾಳ ಮತ್ತು ಗುದದ್ವಾರದ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಿದ್ದು, ಈಗಾಗಲೇ 112 ತಪಾಸಣೆಗಳನ್ನು ಮಾಡಲಾಗಿದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಮೆಮೊಗ್ರಫಿ ಸೌಲಭ್ಯವನ್ನು ಅಳವಡಿಸಲಾಗಿದೆ. ಹಲ್ಲಿನ ಚಿಕಿತ್ಸೆಗಾಗಿ 360 ಡಿಗ್ರಿಯಲ್ಲಿ ಚಿತ್ರೀಕರಿಸುವ ಅತ್ಯಾಧುನಿಕ ಒಪಿಜಿ ಎಕ್ಸ್-ರೇ ಯಂತ್ರವನ್ನು ರು.15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದೆ ಎಂದರು.
ಸುಮಾರು 4 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆಯ ನವೀಕರಣ ಕಾರ್ಯ ನಡೆಯುತ್ತಿದ್ದು, ವಾರ್ಡ್‍ಗಳಿಗೆ ಬಣ್ಣ ಬಳಿಯುವುದು, ಬ್ಲಡ್ ಬ್ಯಾಂಕ್ ನವೀಕರಣ ಹಾಗೂ ಒಪಿಡಿ ಬ್ಲಾಕ್ ಹೊರಗಡೆ ನೋಂದಣಿ ಕೌಂಟರ್ ಸ್ಥಾಪಿಸುವ ಕಾರ್ಯಗಳು ಪ್ರಗತಿಯಲ್ಲಿವೆ. ಹೊರರೋಗಿ ವಿಭಾಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸಿಎಸ್‍ಆರ್ ನಿಧಿಯಡಿ 7 ಲಕ್ಷ ರು. ವೆಚ್ಚದಲ್ಲಿ 50 ರಿಂದ 100 ಜನ ಕುಳಿತುಕೊಳ್ಳಬಹುದಾದ ವಿಶಾಲವಾದ ತಂಗುದಾಣ ನಿರ್ಮಿಸಲಾಗಿದೆ. ಇದು ಮಳೆ ಮತ್ತು ಬೇಸಿಗೆ ಕಾಲದಲ್ಲಿ ರೋಗಿಗಳ ಸಂಬಂಧಿಕರಿಗೆ ವಿಶ್ರಾಂತಿ ಪಡೆಯಲು ಸಹಕಾರಿಯಾಗಿದೆ. ಇದರೊಂದಿಗೆ ಮೃತದೇಹಗಳನ್ನು ಸಂರಕ್ಷಿಸಿಡಲು ಸಂಸದರ ನಿಧಿಯಡಿ 10 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ನಾಲ್ಕು ‘ಹೈ ಕೋಲ್ಡ್ ಬಾಕ್ಸ್’ಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆಯ ಸ್ವಚ್ಛತೆಗೆ ಪೂರಕವಾಗಿ ಲಾಂಡ್ರಿ ವಿಭಾಗಕ್ಕೆ ಹೊಸದಾಗಿ ಒಂದು ಟಂಬಲ್ ಡ್ರೈಯರ್ ಹಾಗೂ ಮೂರು ಸೆಮಿ ಡ್ರೈಯರ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸೂಪರ್ ಸ್ಪೆಷಾಲಿಟಿ ತಜ್ಞರನ್ನು ವಾರಕ್ಕೊಮ್ಮೆ ಕರೆಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ನರರೋಗ ತಜ್ಞರು ಪ್ರತಿ ಶುಕ್ರವಾರ, ಹೃದ್ರೋಗ ತಜ್ಞರು ಪ್ರತಿ ಗುರುವಾರ, ಮೂತ್ರಪಿಂಡ ತಜ್ಞರು ಪ್ರತಿ ಶನಿವಾರ ಹಾಗೂ ಮಕ್ಕಳ ಹೃದ್ರೋಗ ತಜ್ಞರು ಪ್ರತಿ ತಿಂಗಳ ಮೊದಲ ಬುಧವಾರದಂದು ಲಭ್ಯವಿರುತ್ತಾರೆ. ಅಲ್ಲದೆ, ಕ್ಯಾನ್ಸರ್ ತಜ್ಞರು ವಾರಕ್ಕೆ ಮೂರು ದಿನ ಲಭ್ಯವಿದ್ದು ಶಸ್ತ್ರ ಚಿಕಿತ್ಸೆ ಹಾಗೂ ಕೀಮೋಥೆರಪಿ ಸಲಹೆಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ನಮ್ಮ ಪ್ರಮುಖ ಗುರಿ ಎಂದರು.
ಜಿಲ್ಲಾಸ್ಪತ್ರೆಯು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಹಿನ್ನೆಲೆ ಸಿಬ್ಬಂದಿ ಕೊರತೆ ನೀಗಿದೆ. ವಿವಿಧ ವಿಭಾಗಗಳಿಗೆ 30 ಹೊಸ ವೈದ್ಯರು, 30 ನುರಿತ ಶುಶ್ರೂಷಾಧಿಕಾರಿಗಳು ಹಾಗೂ 14 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ದೊರೆಯುತ್ತಿದೆ. ಒಂದೇ ಕೊಠಡಿಯಲ್ಲಿ ಮೂವರು ವೈದ್ಯರು ಏಕಕಾಲಕ್ಕೆ ರೋಗಿಗಳನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಪಾರ್ಟಿಷನ್ ಮಾಡಲಾಗಿದ್ದು, ಟೈಲ್ಸ್ ಅಳವಡಿಸಿ ಸುಂದರಗೊಳಿಸಲಾಗಿದೆ. ಇದರಿಂದ ಜನರಲ್ ಸರ್ಜರಿ, ಆರ್ಥೋಪೆಡಿಕ್, ಚರ್ಮದ ವಿಭಾಗ, ಇಎನ್‍ಟಿ, ಫಿಸಿಯೋಥೆರಪಿ ಹಾಗೂ ಮೆದುಳು ಸಂಬಂಧಿ ವಿಭಾಗಗಳಲ್ಲಿ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ದೊರೆಯಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಹೇಳಿದರು.