ದ್ವಿತೀಯ ಪಿಯು ಪರೀಕ್ಷೆಯಲ್ಲಿ 28 ಸ್ಥಾನಕ್ಕೆ ಕುಸಿದ ಚಿತ್ರದುರ್ಗ

| Published : Apr 09 2025, 12:33 AM IST

ದ್ವಿತೀಯ ಪಿಯು ಪರೀಕ್ಷೆಯಲ್ಲಿ 28 ಸ್ಥಾನಕ್ಕೆ ಕುಸಿದ ಚಿತ್ರದುರ್ಗ
Share this Article
  • FB
  • TW
  • Linkdin
  • Email

ಸಾರಾಂಶ

ಶೇ.59.87ರಷ್ಟು ಫಲಿತಾಂಶ । ಕಳೆದ ಬಾರಿ 27ನೇ ಸ್ಥಾನದಲ್ಲಿತ್ತು । ಈ ಬಾರಿ ಒಂದು ಸ್ಥಾನ ಕುಸಿತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಮತ್ತೆ ಕಳಪೆ ಫಲಿತಾಂಶ ದಾಖಲು ಮಾಡಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.59.87 ರಷ್ಟು ಫಲಿತಾಂಶ ಲಭಿಸಿದೆ.

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 4,590 ವಿದ್ಯಾರ್ಥಿಗಳ ಪೈಕಿ 1,684 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 3,746 ವಿದ್ಯಾರ್ಥಿಗಳ ಪೈಕಿ 2,192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 6,425 ವಿದ್ಯಾರ್ಥಿಗಳಲ್ಲಿ 4,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 14,761 ವಿದ್ಯಾರ್ಥಿಗಳಲ್ಲಿ 8,206 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಗೆ ಹಾಜರಾದ 13,426 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 8,038 ತೇರ್ಗಡೆಯಾಗಿದ್ದಾರೆ. 1,082 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ 253 ಖಾಸಗಿ ವಿದ್ಯಾರ್ಥಿಗಳಲ್ಲಿ 61 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 9,926 ವಿದ್ಯಾರ್ಥಿಗಳಲ್ಲಿ 5,471 ಮಂದಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಹಾಜರಾದ 4,835 ವಿದ್ಯಾರ್ಥಿಗಳ ಪೈಕಿ 2,735 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಚಿತ್ರದುರ್ಗ ತಾಲೂಕಿನ ಸಿರಿಗೆರೆಯ ಬಿ.ಲಿಂಗಯ್ಯ ಪಿಯು ಕಾಲೇಜು ವಿದ್ಯಾರ್ಥಿ ಪಾಂಡುರಂಗ ಆನೆಗೊಂದಿ 586 (ಶೇ.97.66) ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹೊಳಲ್ಕೆರೆ ತಾಲೂಕಿನ ಮುತ್ತಗದೂರು ಗ್ರಾಮದ ತರಳಬಾಳು ಪಿಯು ಕಾಲೇಜಿನ ಅಂಜುಮನ್ ಬಾನು ಎಚ್.ಎಸ್ 581 (ಶೇ.96.83) ಹಾಗೂ ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಆಂಜನೇಯ ಪಿಯು ಕಾಲೇಜಿನ ಸಮೀನ ಜೆ. 579 (ಶೇ.96.5) ಅಂಕಗಳಿಸುವುದರೊಂದಿಗೆ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಚಿತ್ರದುರ್ಗ ನಗರದ ಎಸ್ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಇಶಿತಾ ಬಿ.ಎನ್ 592 (ಶೇ.98.66), ಸಾಕ್ಷಿ ಎಸ್.ಬಿ 589 (ಶೇ.98.16) ಹಾಗೂ ರಿಯ ಎಸ್ ಕೊಠಾರಿ 588 (ಶೇ.588) ಅಂಕಗಳನ್ನು ಗಳಿಸುವ ಮೂಲಕ ಅನುಕ್ರಮವಾಗಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಪಿಯು ಕಾಲೇಜು ವಿದ್ಯಾರ್ಥಿ ಮಾರುತಿ ಎಂ. 593 (ಶೇ.98.83) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಚಿತ್ರದುರ್ಗ ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ವಿಜೇತರೆಡ್ಡಿ ಬಿ.ಸಿ 589 (ಶೇ.98.16) ಹಾಗೂ ಅಮರೇಶ್ 587 (ಶೇ.97.83) ಅಂಕಗಳನ್ನು ಗಳಿಸುವ ಮೂಲಕ ಅನುಕ್ರಮವಾಗಿ ಜಿಲ್ಲೆಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಎಸ್‌ಆರ್‌ಎಸ್ ಕಾಲೇಜಿಗೆ ಮೊದಲ ಮೂರು ಸ್ಥಾನ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಪ್ರತಿಷ್ಠಿತ ಎಸ್‌ಆರ್‌ಎಸ್‌ ಪಿಯು ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಜಿಲ್ಲೆಯ ಮೊದಲ ಮೂರು ಸ್ಥಾನಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಇಶಿತಾ ಬಿ.ಎನ್ 600ಕ್ಕೆ 592 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕ್ರಮವಾಗಿ ಸಾಕ್ಷಿ ಎಸ್.ಬಿ. ವಿಜೇತ ರೆಡ್ಡಿ ಬಿ.ಸಿ ಮತ್ತು ರಿಯಾ ಎಸ್.ಕೊಠಾರಿ 589, 589 ಹಾಗೂ 588 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿಷಯವಾರು 53 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ 444 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರು, ಆಢಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.