ಚಿತ್ರದುರ್ಗವೀಗ ಮತ ಆಶೀರ್ವಾದದ ನೆಲೆವೀಡು

| Published : Mar 24 2024, 01:43 AM IST

ಸಾರಾಂಶ

ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಸಂಸದ ಹಾಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಸನ್ಮಾನಿಸಿದರು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಈ ವೇಳೆ ಚಿತ್ರದುರ್ಗದ ನೆಲ ಮತ ಆಶೀರ್ವಾದದ ನೆಲವೀಡಾಗಿ ಗೋಚರಿಸಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಈ ವೇಳೆ ಚಿತ್ರದುರ್ಗದ ನೆಲ ಮತ ಆಶೀರ್ವಾದದ ನೆಲವೀಡಾಗಿ ಗೋಚರಿಸಿದೆ. ಹಿಂದುಳಿದ, ಶೋಷಿತ ಮಠಾಧೀಶರಿಂದ ತುಂಬಿ ತುಳುಕಾಡುತ್ತಿರುವ ಚಿತ್ರದುರ್ಗಕ್ಕೆ ಬಿಜೆಪಿ ಅಭ್ಯರ್ಥಿಗಳು ದೌಡಾಯಿಸಿ ದೀರ್ಘದಂಡ ನಮಸ್ಕಾರ ಮಾಡಿ ಬೆಂಬಲ ಕೋರಿ ವಾಪ್ಸಾಸ್ಸಾಗುತ್ತಿದ್ದಾರೆ. ಭೋವಿ ಗುರುಪೀಠ ಇಂತಹ ಮತ ಆಶೀರ್ವಾದಕ್ಕೆ ಇದೀಗ ವೇದಿಕೆ ಒದಗಿಸಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಿಗೆ ಆಗಮಿಸಿ ಮಾದಾರ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಚರ್ಚಿಸಿ ತೆರಳಿದ್ದರು. ನಂತರ ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಆಗಮಿಸಿ ದಲಿತ, ಹಿಂದುಳಿದ ಮಠಾಧೀಶರಿಗೆ ಗೌರವಿಸಿ ಹೋಗಿದ್ದರು. ಶನಿವಾರ ಶಿವಮೊಗ್ಗದ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಚಿತ್ರದುರ್ಗಕ್ಕೆ ಆಗಮಿಸಿ ಮಠಾಧೀಶರಿಂದ ಆಶೀರ್ವಾದ ಪಡೆದಕೊಂಡು ತೆರಳಿದರು. ರಾಷ್ಟ್ರೀಯ ಹೆದ್ದಾರಿ 4 ರ ಆಸುಪಾಸಿನಲ್ಲಿ ಎಲ್ಲ ಮಠಗಳು ಇರುವುದರಿಂದ ಹುಬ್ಬಳ್ಳಿ, ಬೆಳಗಾವಿ ಕಡೆ ಹೋಗುವವರೆಲ್ಲ ಮಠಗಳ ಪ್ರಾಂಗಣಕ್ಕೆ ಹೆಜ್ಜೆ ಇಟ್ಟು ‘ಬುದ್ದಿ, ನಿಮ್ ದಯೆ ನಮ್ ಮೇಲಿರಲಿ’ ಎಂದು ವಿನಮ್ರತೆ ಕೋರಿಕೆ ಸಲ್ಲಿಸಿ ಹೋಗುತ್ತಿದ್ದಾರೆ. ಅದ್ಹೇಕೋ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಈ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇವರ ಮಠಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿ ಬರುತ್ತಿದ್ದಾರೆ.

ಎರಡು ಸಿದ್ಧಾಂತರ ನಡುವೆ ಚುನಾವಣೆ: ಶನಿವಾರ ಹಿಂದುಳಿದ ಹಾಗೂ ಶೋಷಿತ ಮಠಾಧೀಶರಿಂದ ಗೌರವ ಸ್ವೀಕರಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಕ್ಷೇತ್ರದ ಚುನಾವಣೆ ಗೀತಕ್ಕ, ರಾಘವೇಂದ್ರ ನಡುವೆ ಅಲ್ಲ. ಎರಡು ಪಕ್ಷದ ಸಿದ್ದಾಂತದ ನಡುವಿನದ್ದಾಗಿದೆ. ಎದುರಾಳಿ ಯಾರೆಂದು ನಾವು ತಲೆಕೆಡಿಸಿಕೊಳ್ಳಲ್ಲ. ಬಿಜೆಪಿ ಹೆಮ್ಮರವಾಗಿ ಬೆಳಿದಿದೆ ಎಂದರು.

ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನ ಬಿಜೆಪಿ ಸಂಘಟನೆಗೆ ಶಕ್ತಿ ತುಂಬುವ ಜವಾಬ್ದಾರಿ. ಅದು ವಿಜಯೇಂದ್ರಗೆ ಎಷ್ಟು ದಿನವಿರುತ್ತೋ ಅಲ್ಲಿವರೆಗೆ ಒಳ್ಳೆಯ ಕಾರ್ಯ ಮಾಡುತ್ತಾರೆ. ಕೆ.ಎಸ್ ಈಶ್ವರಪ್ಪ ನಮ್ಮ ನಾಯಕರು, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಇನ್ನೆರಡು ದಿನದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದರು.

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ನೀಡಿದ್ದಾರೆಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ, ಸಿಎಂ ಗೆ ಗ್ಯಾರಂಟಿಗೆ ಹಣ ಹೊಂದಿಸಿ ಸಾಕಾಗಿದ್ದಾರೆ. ಕೈ ಶಾಸಕರಿಗೆ ಕ್ಷೇತ್ರದಲ್ಲಿ ಮುಖ ತೋರಿಸಲು ಆಗುತ್ತಿಲ್ಲ, ಅವರ ತಪ್ಪು ಮುಚ್ಚಿಕೊಳ್ಳಲು ಇನ್ನೊಬ್ಬರ ಕಡೆ ಬೆರಳು ತೋರುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ನಾನು ವಿರೋಧಿಸುತ್ತೇನೆ. ಎಲ್ಲವೂ ಒಂದೇ ಕಡೆ ತೀರ್ಮಾನವಾಗುವುದಕ್ಕೆ ಕುಟುಂಬ ರಾಜಕಾರಣ ಅಂತಾರೆ. ಸಿಎಂ, ಅಧ್ಯಕ್ಷ ಎಲ್ಲರೂ ಒಂದೇ ಕುಟುಂಬದವರಾಗಿರುತ್ತಾರೆ. ಕಾಂಗ್ರೆಸ್‍ನ ನೆಹರು ಮನೆತನಕ್ಕೆ ಕುಟುಂಬ ರಾಜಕಾರಣ ಅಂತಾರೆ ಎಂದು ತಿಳಿಸಿದರು.

ನಾನು ಎಬಿವಿಪಿಯಿಂದ ಬಂದು ಸಂಸದನಾಗಿದ್ದೇನೆ. ಯಾವುದೋ ಒತ್ತಡಕ್ಕಾಗಿ ನನಗೆ ಪಕ್ಷ ಟಿಕೆಟ್ ನೀಡಿಲ್ಲ. ಜನರ ವಿಶ್ವಾಸ ಗಳಿಸಿದ್ದೇನೆ, ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಬಿ ಎಸ್ ವೈ ಚುನಾವಣೆ ರಾಜಕೀಯದಿಂದ ನಿವೃತ್ತರಾಗಿದ್ದಾರೆ, ಮಕ್ಕಳು ಹೊರಗಡೆ ಹೋಗಿ ಬಂದಾಗ ತಾಯಂದಿರು ದೃಷ್ಟಿ ತೆಗೆಯುತ್ತಾರೆ. ನನ್ನ ಮೇಲೆ ಯಾರದ್ದಾದರೂ ದೃಷ್ಟಿ ಬಿದ್ದಿರಬಹುದು, ತೆಗೆಸಿಕೊಂಡು ಹೋಗಲು ದುರ್ಗದ ಮಠಗಳಿಗೆ ಬಂದಿದ್ದೇನೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದರು.

ಕುಂಚಿಟಿಗ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು,ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಶಿವಮೊಗ್ಗ ನಾರಾಯಣ ಗುರುಪೀಠದ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ,ಹಡಪದ ಅಪ್ಪಣ್ಣ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಇರಕಲ್ ಶಿವಶಕ್ತಿ ಪೀಠಧ ಬಸವ ಪ್ರಸಾದ ಸ್ವಾಮೀಜಿ, ಅನ್ನಪೂರ್ಣೇಶ್ವರಿ ಮಠದ ಮಹಾಲಿಂಗ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು, ಶಾಸಕ ಎಂ.ಚಂದ್ರಪ್ಪ, ಬಿಜೆಪಿಯ ವಕ್ತಾರ ದಗ್ಗೆ ಶಿವಪ್ರಕಾಶ್, ನಗರಾಧ್ಯಕ್ಷ ನವೀನ ಚಾಲುಕ್ಯ, ನಗರ ಕಾರ್ಯದರ್ಶಿ ಕಿರಣ ಕುಮಾರ್ ತಿಮ್ಮಣ್ಣ, ಯುವ ಮೋರ್ಚಾ ಚಂದ್ರು ಇದ್ದರು.