ಆಲೂರು ಸಮೀಪದ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ‘ಚಿತ್ರಕೂಟ ಆಯುರ್ವೇದ ಹಬ್ಬ’ವು ಅತ್ಯಂತ ಸಂಭ್ರಮ ಹಾಗೂ ಜನಮೆಚ್ಚುಗೆಯೊಂದಿಗೆ ಮುಕ್ತಾಯಗೊಂಡಿತು.
ಕುಂದಾಪುರ/ಆಲೂರು: ಆಲೂರು ಸಮೀಪದ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ‘ಚಿತ್ರಕೂಟ ಆಯುರ್ವೇದ ಹಬ್ಬ’ವು ಅತ್ಯಂತ ಸಂಭ್ರಮ ಹಾಗೂ ಜನಮೆಚ್ಚುಗೆಯೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ವೈದ್ಯ ಡಾ. ರಘುರಾಮ್, ಇದು ಕೇವಲ ಒಂದು ಹಬ್ಬದ ಸಮಾರೋಪ ಸಮಾರಂಭವಲ್ಲ; ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಆಯುರ್ವೇದ ಹಬ್ಬದ ನೈಜ ಉದ್ಘಾಟನೆ. ಯುವ ವೈದ್ಯ ಡಾ. ರಾಜೇಶ್ ಬಾಯರಿ ಅವರು ಕಂಡ ಕನಸು, ತಂದೆ-ತಾಯಿ ಹಾಗೂ ಗುರು-ಹಿರಿಯರ ಆಶೀರ್ವಾದದ ಬಲದಿಂದ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಾರ್ವಜನಿಕರ ಅಪಾರ ಸಹಭಾಗಿತ್ವ ಮತ್ತು ಪ್ರೀತಿಯೇ ಈ ಸಂಸ್ಥೆಯ ಮಹಾನ್ ಶಕ್ತಿ’ ಎಂದು ಬಣ್ಣಿಸಿದರು.ಸಮಾಜ ಸೇವಕ ಹಾಗೂ ಖ್ಯಾತ ದಾನಿ ಮಾರ್ಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಮಾತನಾಡಿ, ಗ್ರಾಮೀಣ ಭಾಗವಾದ ಕಳಿಯಲ್ಲಿ ಇಂತಹ ಅತ್ಯಾಧುನಿಕ ಹಾಗೂ ಗುಣಮಟ್ಟದ ಆಯುರ್ವೇದ ಸಂಸ್ಥೆಯನ್ನು ಕಟ್ಟಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿರುವುದು ಇಡೀ ಊರಿನ ಹೆಮ್ಮೆ ಮತ್ತು ಸೌಭಾಗ್ಯ. ಇಂದಿನ ಧಾವಂತದ ಬದುಕಿನಲ್ಲಿ ಅತಿಯಾದ ಆಸೆ ಹಾಗೂ ರಾಸಾಯನಿಕಯುಕ್ತ ಕಲಬೆರಕೆ ಆಹಾರ ಪದ್ಧತಿಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬರೂ ನೈಸರ್ಗಿಕ ಮತ್ತು ಪಾರಂಪರಿಕ ಆಯುರ್ವೇದ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ’ ಎಂದು ಕಿವಿಮಾತು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್. ಶೆಣೈ ಮಾತನಾಡಿ, ವೈದ್ಯರು ಸೂಚಿಸುವ ಪಥ್ಯ ಹಾಗೂ ಜೀವನಶೈಲಿಯ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿದಾಗ ಮಾತ್ರ ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.ಚಿತ್ರಕೂಟದ ಸಂಸ್ಥಾಪಕ ಡಾ. ರಾಜೇಶ್ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಆರಂಭದ ದಿನಗಳಿಂದಲೂ ಗ್ರಾಮಸ್ಥರು, ಹಿರಿಯರು, ಪೋಷಕರು ಮತ್ತು ಮಾಧ್ಯಮ ಮಿತ್ರರು ನೀಡಿದ ನಿರಂತರ ಬೆಂಬಲವೇ ಈ ಯಶಸ್ಸಿಗೆ ಕಾರಣ. ನಿರೀಕ್ಷೆಗೂ ಮೀರಿ ಸುಮಾರು 7 ರಿಂದ 9 ಸಾವಿರಕ್ಕೂ ಅಧಿಕ ಸಾರ್ವಜನಿಕರು ಹಬ್ಬದಲ್ಲಿ ಭಾಗವಹಿಸಿ ಆಶೀರ್ವದಿಸಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಮಹಾಬಲ ಬಾಯರಿ, ಡಾ. ಅನುಲೇಖಾ ಬಾಯರಿ ಸೇರಿದಂತೆ ಕುಟುಂಬಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.