ಸಾರಾಂಶ
ಚಳ್ಳಕೆರೆ: ತಾಲ್ಲೂಕಿನಾದ್ಯಂತ ಚಿತ್ತಮಳೆ ತನ್ನ ರೌದ್ರಾವತಾರವನ್ನು ಮುಂದುವರೆಸಿದ್ದು, ಎಲ್ಲೆಡೆ ಕೆರೆ, ಕಟ್ಟೆ ತುಂಬಿ ನೀರು ಹರಿಯುತ್ತಿದೆ.
ತಾಲ್ಲೂಕಿನ ಬಹುತೇಕ ರಸ್ತೆಗಳು ನೀರಿನಿಂದ ಆವೃತ್ತವಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಪ್ರತಿನಿತ್ಯ ತೊಂದರೆ ಅನುಭವಿಸಬೇಕಾದ ಸ್ಥಿತಿ ಉಂಟಾಗಿದೆ.ನಗರದ ಪಾವಗಡ ರಸ್ತೆಯಲ್ಲಿ ಹರಿಯುತ್ತಿರುವ ರಭಸವಾದ ನೀರಿನಲ್ಲಿ ರಸ್ತೆದಾಟಲು ಮುಂದಾದಗ ಟ್ರ್ಯಾಕ್ಟರ್ ಹಾಗೂ ಆಟೋರಿಕ್ಷಾ ನೀರಿನ ರಭಸಕ್ಕೆ ತೇಲಿಹೋಗುತ್ತಿದ್ದು, ಪೊಲೀಸ್ ಹಾಗೂ ಸಾರ್ವಜನಿಕರ ಸಹಕಾರದಿಂದ ಎರಡೂ ವಾಹನಗಳನ್ನು ದಡಕ್ಕೆ ತೆರಲಾಗಿದೆ. ಇಬ್ಬರೂ ಚಾಲಕರು ಹಾರಿತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ನಗರದ ಕರೇಕಲ್ ಕೆರೆಯ ಕೋಡಿಹರಿಯುವ ಜಾಗವನ್ನು ತಾಲ್ಲೂಕು, ಸಣ್ಣ ನೀರಾವರಿ ಇಲಾಖೆ ಸಹಕಾದೊಂದಿಗೆ ಸುಮಾರು ಮೂರು ಅಡಿಗಳಷ್ಟು ಕೆರೆಕೋಡಿಯನ್ನು ಮೂರು ಅಡಿ ತೆಗೆದಿದ್ದು, ನೀರು ಸರಾಗಹರಿಯುತ್ತಿದೆ. ಇದರಿಂದ ಸಧ್ಯದ ಸ್ಥಿತಿಯಲ್ಲಿ ಅಪಾಯದಿಂದ ಪಾರಾದಂತಾಗಿದೆ. ಕೆರೆ ಏರಿಯಲ್ಲಿ ಕಾಣಿಸಿಕೊಂಡ ಎರಡೂ ರಂಧ್ರಗಳನ್ನು ನೀರಾವರಿ ಇಲಾಖೆ ಪರಿಶೀಲಿಸಿದ್ದು ಶೀಘ್ರದಲ್ಲೇ ಅವುಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.ತಾಲ್ಲೂಕಿನ ತಳಕು ಹೋಬಳಿಯ ಲಂಬಾಣಿಹಟ್ಟಿಯಲ್ಲಿ ರೆಡ್ಡಿನಾಯ್ಕ ಎಂಬುವವರ ಮನೆಯಲ್ಲಿ ಸುಮಾರು ೧೦ಕ್ಕೂ ಹೆಚ್ಚು ಜನರು ವಾಸವಿದ್ದು ಮಳೆಯಿಂದ ಸಂಪೂರ್ಣ ಮನೆ ಕುಸಿದಿದೆ. ಮಲ್ಲೂರಹಳ್ಳಿಯಲ್ಲಿ ಚಿನ್ನಮ್ಮ ಎಂಬುವವರ ಮನೆ ಕುಸಿದು ೫೦ ಸಾವಿರ ನಷ್ಟವಾಗಿದೆ. ಚನ್ನಮ್ಮನಾಗತಿಹಳ್ಳಿ ಚನ್ನರಾಯಪ್ಪ ಎಂಬುವವರ ಮನೆ ಕುಸಿದು ೮೦ ಸಾವಿರನಷ್ಟವಾಗಿದೆ. ಕರೀಕೆರೆ ಗ್ರಾಮದ ಲೋಕೇಶ್, ಗೌಡಗೆರೆ ಗ್ರಾಮದ ಶಿವಮೂರ್ತಿ, ಮಮೈನಹಟ್ಟಿಯ ಜಯಲಕ್ಷಿö್ಮ ಮನೆ ಕುಸಿದು ತಲಾ ೩೫ ಸಾವಿರ ನಷ್ಟವಾಗಿದೆ. ಕುದಾಪುರ ಬಸವನಾಯಕ, ಗುಂಡಪ್ಪ, ಮಲ್ಲೂರಹಟ್ಟಿಯ ಜಯಮ್ಮ, ಉಗ್ರಪ್ಪ, ಪಾಂಡುನಾಯ್ಕ ಮನೆಗಳು ಗೋಡೆ ಕುಸಿದು ಸುಮಾರು ೧.೬೦ ಲಕ್ಷ ನಷ್ಟ ಉಂಟಾಗಿದೆ.
ಪಿ.ಮಹದೇವಪುರ ಚನ್ನಮ್ಮ ಎಂಬುವವರ ೩.೧೮ ಎಕರೆ ಜಮೀನಿನಲ್ಲಿದ್ದ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ನಾಯಕನಹಟ್ಟಿ ಚಂದ್ರಪ್ಪ ಎಂಬುವವರ ಸುಮಾರು ೨ ಎಕರೆ ರಾಗಿಬೆಳೆಯಲ್ಲಿ ನೀರು ನಿಂತು ಸಂಪೂರ್ಣ ಬೆಳೆ ಹಾನಿಯಾಗಿದೆ. ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ತಹಶೀಲ್ದಾರ್ ರೇಹಾನ್‌ಪಾಷ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.