ಚಾಕೋಲೆಟ್ ತುಂಬಿರುವ ಡಬ್ಬಿಗಳು ಪತ್ತೆ

| Published : Sep 24 2024, 01:53 AM IST

ಸಾರಾಂಶ

ಅರೇಹಳ್ಳಿ ಗ್ರಾಮದ ಸುತ್ತಮುತ್ತ ಕೆಲವು ಜಾಗದಲ್ಲಿ ಚಾಕೋಲೆಟ್ ತುಂಬಿರುವ ಡಬ್ಬಿಗಳು ಕಂಡುಬರುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ದಿನನಿತ್ಯ ಕೆಲವು ದಿನಗಳವರೆಗೆ ವಿವಿಧ ಸ್ಥಳದಲ್ಲಿ ರಸ್ತೆಯುದ್ದಕ್ಕೂ ವಿವಿಧ ಬಗೆಯ ಚಾಕೋಲೆಟ್‌ಗಳನ್ನು ಬಿಡಿ ಬಿಡಿಯಾಗಿ, ಹಲವೆಡೆ ಪ್ಲಾಸ್ಟಿಕ್ ಪೊಟ್ಟಣದಲ್ಲಿ ತುಂಬಿಸಿ ಬಿಸಾಕಿರುವುದಲ್ಲದೆ, ಇನ್ನೂ ಕೆಲವೆಡೆ ಚಾಕೋಲೆಟ್ ತುಂಬಿದ ಹೊಸ ಡಬ್ಬಿ ಗೋಚರವಾಗುತ್ತಿದೆ. ಗ್ರಾಮಸ್ಥರು ಈ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಅರೇಹಳ್ಳಿ ಗ್ರಾಮದ ಸುತ್ತಮುತ್ತ ಕೆಲವು ಜಾಗದಲ್ಲಿ ಚಾಕೋಲೆಟ್ ತುಂಬಿರುವ ಡಬ್ಬಿಗಳು ಕಂಡುಬರುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಒಂದು ತಿಂಗಳ ಹಿಂದೆ ಪಟ್ಟಣ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಉದೇವಾರ ರಸ್ತೆಯ ಶಾಂತಿ ಪ್ಲಾಂಟೇಶನ್ ಸಮೀಪ ರಸ್ತೆ ಬದಿಯಲ್ಲಿ ಚಾಕೋಲೆಟ್ ತುಂಬಿರುವ ಡಬ್ಬಿಗಳು ಕಂಡು ಬಂದಿತ್ತು. ಸ್ವಾಭಾವಿಕವಾಗಿ ವಾಹನದಲ್ಲಿ ಹೋಗುವಾಗ ಬಿದ್ದಿರಬಹುದು ಅಥವಾ ಅವಧಿ ಮುಗಿದ ಅಥವಾ ಕಳಪೆಯಾಗಿ ಬಿಸಾಕಿರಬಹುದ ಎಂದು ಊಹಿಸಿ ಜನರು ಸುಮ್ಮನಾಗಿದ್ದರು. ಆದರೆ ದಿನನಿತ್ಯ ಕೆಲವು ದಿನಗಳವರೆಗೆ ವಿವಿಧ ಸ್ಥಳದಲ್ಲಿ ರಸ್ತೆಯುದ್ದಕ್ಕೂ ವಿವಿಧ ಬಗೆಯ ಚಾಕೋಲೆಟ್‌ಗಳನ್ನು ಬಿಡಿ ಬಿಡಿಯಾಗಿ, ಹಲವೆಡೆ ಪ್ಲಾಸ್ಟಿಕ್ ಪೊಟ್ಟಣದಲ್ಲಿ ತುಂಬಿಸಿ ಬಿಸಾಕಿರುವುದಲ್ಲದೆ, ಇನ್ನೂ ಕೆಲವೆಡೆ ಚಾಕೋಲೆಟ್ ತುಂಬಿದ ಹೊಸ ಡಬ್ಬಿ ಗೋಚರವಾಗುತ್ತಿದೆ. ಗ್ರಾಮಸ್ಥರು ಈ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಸಂಜೆ ಅಂಬೇಡ್ಕರ್ ತೋಟದ ಕೂಲಿ ಕಾರ್ಮಿಕರು ಬಾಲಗುಳಿಯಲ್ಲಿ ಕೆಲಸವನ್ನು ಮುಗಿಸಿ ಬರುವ ವೇಳೆ ಚರ್ಚ್ ಸಮೀಪ ರಸ್ತೆಯ ಬದಿಯಲ್ಲಿ ಚಾಕೋಲೆಟ್ ತುಂಬಿದ ಹೊಸದಾದ ಡಬ್ಬಿ ಸಿಕ್ಕಿದ್ದು ಸಂಶಯಗೊಂಡ ಅವರು ನೆರೆಹೊರೆಯವರಿಗೆ ತಿಳಿಸಿದ್ದಾರೆ.

ವಿಷಯ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದ್ದಂತೆ ಇನ್ನೂ ಹಲವು ತೋಟದ ಕಾರ್ಮಿಕರಿಗೆ ಲಿಂಗಾಪುರ, ಮಲಸಾವರ ಸೇರಿದಂತೆ ಇನ್ನಿತರ ರಸ್ತೆಯ ಹಲವೆಡೆ ಸಿಕ್ಕಿರುವುದು ತಿಳಿದು ಬಂದಿದೆ. ಪಟ್ಟಣದ ಯಾವುದೇ ಮೆಡಿಕಲ್, ಅಂಗಡಿಗಳಲ್ಲಿ ಈ ತರಹದ ಚಾಕೋಲೆಟ್ ಸರಬರಾಜು ಅಥವಾ ಮಾರಾಟ ಮಾಡುತ್ತಿಲ್ಲ. ಚಾಕೋಲೆಟ್‌ನ ಅವಧಿ ಮುಗಿದರೆ ವಾಪಸ್ಸು ಕಂಪನಿಗೆ ಮರಳಿಸುತ್ತಾರೆ ಹೊರತು ರಸ್ತೆಯಲ್ಲಿ ಬಿಸಾಡುವುದಿಲ್ಲಾ ಎಂದು ಅಂಗಡಿಯವರು ಹೇಳುತ್ತಾರೆ.

ಚಾಕೋಲೆಟ್ ವಿಷಯವನ್ನು ಸಂಬಂದಪಟ್ಟ ಅಧಿಕಾರಿಗಳು ಕೂಲಂಕಷವಾಗಿ ಗಮನಿಸಿ ಈ ಚಾಕೋಲೆಟ್ ಏಕೆ ಎಸೆದಿದ್ದಾರೆ ಅಥವಾ ಇನ್ನೇನದಾರೂ ಈ ಚಾಕೋಲೆಟ್‌ನಲ್ಲಿ ಮಿಶ್ರಣ ಹಾಕಿದ್ದಾರೋ ಎಂದು ದೃಢಪಡಿಸಲು ಆಹಾರ ನಿರೀಕ್ಷರ ಸ್ವಾಧೀನಕ್ಕೆ ಒಪ್ಪಿಸಿ ಅಧಿಕೃತ ಮಾಹಿತಿಯನ್ನು ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.