ಚೊಂಬ ಕೊಟ್ಟ ಕೇಂದ್ರ: ಇಂದು ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಮುತ್ತಿಗೆ

| Published : Aug 04 2024, 01:22 AM IST

ಚೊಂಬ ಕೊಟ್ಟ ಕೇಂದ್ರ: ಇಂದು ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಅನುದಾನ ನೀಡದಿರುವುದು, ಲೋಕಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭಾರತ್ ಅಕ್ಕಿ ನೀಡದಿರುವುದನ್ನು ಖಂಡಿಸಿ ಖಾಲಿ ಚೊಂಬು ಹಿಡಿದುಕೊಂಡು ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ಆ.4ರಂದು ಮುತ್ತಿಗೆ ಹಾಕುವುದಾಗಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ನೂತನ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11.30ಕ್ಕೆ ಜಯದೇವ ವೃತ್ತದಿಂದ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಖಾಲಿ ಚೊಂಬುಗಳನ್ನು ಹಿಡಿದುಕೊಂಡು, ಬಿಜೆಪಿ ಜಿಲ್ಲಾ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹೊರಟು, ಮುತ್ತಿಗೆ ಹಾಕಲಾಗುವುದು ಎಂದರು.

ಕೇಂದ್ರ ಸರ್ಕಾರವು ಈ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಚುನಾವಣೆ ಪೂರ್ವದಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಬಿಜೆಪಿಯವರು ಸರ್ಕಲ್‌ಗಳಲ್ಲಿ, ಜನದಟ್ಟಣೆ ಪ್ರದೇಶಗಳಲ್ಲಿ ಜನರಿಗೆ ಕರೆದು ಕರೆದು, ಭಾರತ್ ಅಕ್ಕಿ ಅಂತಾ ಕೊಟ್ಟಿದ್ದರು. ಆದರೆ, ಚುನಾವಣೆ ನಂತರ ಭಾರತ್ ಅಕ್ಕಿ ನೀಡಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ನೇತೃತ್ವದಲ್ಲಿ ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಬಾಗಿನ ಅರ್ಪಣೆ ಮುಂದೂಡಿಕೆ: ಭದ್ರಾ ಅಣೆಕಟ್ಟೆ ತುಂಬಿರುವ ಹಿನ್ನೆಲೆಯಲ್ಲಿ ಡ್ಯಾಂ ಸುತ್ತಮುತ್ತಲಿನ ಪ್ರದೇಶದಲ್ಲಿ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಹಿನ್ನೆಲೆ ಆ.4ರಂದು ಕಾಂಗ್ರೆಸ್ ಪಕ್ಷದಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು, ದಾಳಿ ಮಾಡುತ್ತಿದೆ. ಈ ಎಲ್ಲಾ ವಿಚಾರವನ್ನು ಮುಂದಿಟ್ಟುಕೊಂಡು, ಕೇಂದ್ರದ ಸೇಡಿನ ರಾಜಕಾರಣದ ವಿರುದ್ಧವೂ ಹೋರಾಟ ನಡೆಯಲಿದೆ ಎಂದರು.

ಪಕ್ಷದ ಮುಖಂಡರಾದ ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ಅಬ್ದುಲ್ ಜಬ್ಬಾರ್‌, ಆರೀಫ್ ಖಾನ್, ಮಂಜಮ್ಮ, ಮಂಗಳ, ದಾಕ್ಷಾಯಣಮ್ಮ, ಶುಭಮಂಗಳ, ರಾಜೇಶ್ವರಿ, ಹರೀಶ, ಯುವರಾಜ, ಡೋಲಿ ಚಂದ್ರು ಇತರರು ಇದ್ದರು.