ಚೊಂಬು, ಕೇಸರಿ ಶಾಲು ಕಾಂಗ್ರೆಸ್‌ನ ಹತಾಶೆ ತೋರಿಸುತ್ತಿದೆ: ವಿಜಯೇಂದ್ರ

| Published : Apr 21 2024, 02:21 AM IST / Updated: Apr 21 2024, 01:53 PM IST

ಚೊಂಬು, ಕೇಸರಿ ಶಾಲು ಕಾಂಗ್ರೆಸ್‌ನ ಹತಾಶೆ ತೋರಿಸುತ್ತಿದೆ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

 ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳಿಂದ ಮತ ಬರುತ್ತದೆ ಎಂಬ ಭ್ರಮೆಯಲ್ಲಿತ್ತು. ಆದರೆ ಈಗ ತಾನು ಗೆಲ್ಲುವುದು ಸಾಧ್ಯವಿಲ್ಲ ಎಂದು ಗೊತ್ತಾಗಿ, ಬಿಜೆಪಿಯ ವಿರುದ್ಧ ಜಾಹೀರಾತುಗಳನ್ನು ನೀಡಲಾರಂಭಿಸಿದೆ ಎಂದು ವಿಜಯೇಂದ್ರ ಆರೋಪಿಸಿದರು.

 ಉಡುಪಿ :  ರಾಜ್ಯ ಸರ್ಕಾರ ತನ್ನ ವೈಫಲ್ಯ, ಅಭಿವೃದ್ಧಿ ಶೂನ್ಯತೆಯಿಂದ ಚುನಾವಣಾ ಪ್ರಚಾರದ ಹುಮ್ಮಸ್ಸನ್ನೇ ಕಳೆದುಕೊಂಡಿದೆ. ಚೊಂಬು, ಕೇಸರಿ ಶಾಲು ಜಾಹೀರಾತುಗಳು ಕಾಂಗ್ರೆಸ್‌ನ ಹತಾಶೆಯನ್ನು ತೋರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ದಿನೇದಿನೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ನಿತ್ಯ ಹಲ್ಲೆ, ಕೊಲೆಗಳಾಗುತ್ತಿವೆ. ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿಗಳಿಂದ ಮತ ಬರುತ್ತದೆ ಎಂಬ ಭ್ರಮೆಯಲ್ಲಿತ್ತು. ಆದರೆ ಈಗ ತಾನು ಗೆಲ್ಲುವುದು ಸಾಧ್ಯವಿಲ್ಲ ಎಂದು ಗೊತ್ತಾಗಿ, ಬಿಜೆಪಿಯ ವಿರುದ್ಧ ಜಾಹೀರಾತುಗಳನ್ನು ನೀಡಲಾರಂಭಿಸಿದೆ. ಇದರಿಂದ ಯಾವುದೇ ಪರಿಣಾಮಗಳಾಗುವುದಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಈಶ್ವರಪ್ಪ ಬಗ್ಗೆ ಯೋಚಿಸುವುದಕ್ಕೆ ನಾವು ಚುನಾವಣಾ ಹೋರಾಟದಲ್ಲಿ ವ್ಯಸ್ತರಾಗಿದ್ದೇವೆ. ಅವರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಾಗಿದೆ. ಏನು ಕ್ರಮ ತೆಗೆದುಕೊಳ್ಳಬೇಕೋ ಅವರೇ ನಿರ್ಧರಿಸುತ್ತಾರೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈಶ್ವರಪ್ಪ ಅವರು ನಾಮಪತ್ರ ಹಿಂದಕ್ಕೆ ಪಡೆಯದೇ ಕಣದಲ್ಲಿ ಉಳಿಯುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಮಾಡಿದ ಕೆಲಸಗಳು ಮತ್ತು ಮೋದಿ ಅವರ ಜನಪ್ರಿಯತೆಯಿಂದ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಜೆಡಿಎಸ್- ಬಿಜೆಪಿ ಮೈತ್ರಿ ಚುನಾವಣೆಯ ನಂತರ ಮುಗಿಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಮೈತ್ರಿ ಏನಾಗ್ತದೆ ಅಂತ ಅವರೇ ನೋಡ್ತಾರೆ, ಚುನಾವಣೆಯ ನಂತರ ಅವರ ಸಿಎಂ ಕುರ್ಚಿಯೇ ಉಳಿಯುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಮುಂತಾದವರಿದ್ದರು.

ಮೋದಿ ನೆರಳಿಗೂ ಕಾಂಗ್ರೆಸ್ ಹೆದರುತ್ತಿದೆ: ಕೋಟ

ಸುದ್ದಿಗಾರನ್ನುದ್ದೇಶಿಸಿ ಮಾತನಾಡಿದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್, ಮೋದಿ ಅವರ ನೆರಳಿಗೂ ಹೆರುತ್ತಿದೆ ಎಂದು ಇವತ್ತು ಕಾಂಗ್ರೆಸ್ ನೀಡಿದ ಜಾಹೀರಾತಿನಿಂದ ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು.

ದೇಶದಲ್ಲಿ ಒಂದು ಕಾಲದಲ್ಲಿ ಜನರು ಚೊಂಬು ಹಿಡಿದುಕೊಂಡು ಬಹಿರ್ದೇಸೆಗೆ ಜಾಗ ಹುಡುಕುವ ಸನ್ನಿವೇಶ ಇತ್ತು, ಈಗ ಮೋದಿಯಿಂದಾಗಿ ಆ ಚೊಂಬು ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಂಡಿದೆ. ಅದಕ್ಕೆ ಕಾಂಗ್ರೆಸ್ ಕೇಸರಿ ಶಾಲಿನ ಕಣ್ಣು ಹಾಕಿದೆ ಎಂದರು.

ರಾಜ್ಯದಲ್ಲಿ ಹಿಂದುಗಳು ಜೈ ಶ್ರೀರಾಮ್ ಎಂದರೂ ಹಲ್ಲೆ, ಮೋದಿ ಬಗ್ಗೆ ಹಾಡಿದರೂ ಹಲ್ಲೆ, ಹನುಮಾನ್ ಚಾಲಿಸ ಹೇಳಿದರೂ ಹಲ್ಲೆ, ಕಾಲೇಜು ವಿದ್ಯಾರ್ಥಿ ನೇಹಾ ಕೊಲೆ ಇತ್ಯಾದಿಗಳನ್ನು ನೋಡುತಿದ್ದರೆ ಸಿದ್ದರಾಮಯ್ಯ ಸರ್ಕಾರ ಭಯೋತ್ಪಾದಕರ, ರಾಷ್ಟ್ರವಿರೋಧಿಗಳ ಕೈಗೆ ಸಿಲುಕಿರುವುದು ಸ್ಪಷ್ಟವಾಗಿದೆ ಎಂದವರು ಹೇಳಿದರು.