ಸಾರಾಂಶ
ಈ ಭಾರಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರನ್ನೇ ಆಯ್ಕೆ ಮಾಡಬೇಕು ಎಂದು ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಅರುಣ್ ಹೊಸಕೊಪ್ಪ ಶಿಕ್ಷಕರಲ್ಲಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ವಿಧಾನ ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡುವ ಶಿಕ್ಷಕರು ಕನಿಷ್ಠ 3 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಕಡ್ಡಾಯ, ಅದರಂತೆ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವವರು ಕೂಡ ಶಿಕ್ಷಕರೇ ಆಗಿರಬೇಕು. ಆದ್ದರಿಂದ ಈ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರನ್ನೇ ಆಯ್ಕೆ ಮಾಡಬೇಕು ಎಂದು ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ಅರುಣ್ ಹೊಸಕೊಪ್ಪ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು 12 ವರ್ಷಗಳಿಂದ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಕರ ಸಮಸ್ಯೆಗಳನ್ನು ಸ್ವತಃ ಬಲ್ಲವನಾಗಿದ್ದೇನೆ. ಕಳೆದ ಬಾರಿ ತನಗೆ ಅತೀ ಹೆಚ್ಚು ಎರಡನೇ ಪ್ರಾಶಸ್ತ್ಯದ ಮತಗಳು ಬಂದಿದ್ದವು. ಈ ಬಾರಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ತನಗಲ್ಲದಿದ್ದರೂ ಕಣದಲ್ಲಿರುವ ಬೇರೆ ಶಿಕ್ಷಕರಿಗಾದರೂ ಮತ ಹಾಕಿ, ಇಲ್ಲದಿದ್ದರೇ ಮುಂದೆ ಗಣಿ ಉದ್ಯಮಿಗಳು, ಭ್ರಷ್ಟಾಚಾರಿಗಳು ಹಣ ಹಂಚಿ ಗೆದ್ದು ನಂತರ ಅವರು ಶಿಕ್ಷಕರನ್ನೇ ಮರೆಯುತ್ತಾರೆ. ಈ ಕ್ಷೇತ್ರದ ಹಾಲಿವಿಧಾನ ಪರಿಷತ್ ಸದಸ್ಯರು ಶಿಕ್ಷಕ ಮತದಾರರ ಸಮಸ್ಯೆಗಳಿಗೆ ಸ್ಪಂದಿಸದೇ, ಕೇವಲ ಮತಗಳಿಗಾಗಿ ಗಿಫ್ಟ್, ಪಾರ್ಟಿ, ಹಣ ನೀಡಿ ಪಾವಿತ್ರ್ಯತೆಯನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.