ಕರಾವಳಿಯಲ್ಲಿ ವಿಶೇಷ ಬಲಿಪೂಜೆಯೊಂದಿಗೆ ಕ್ರಿಸ್‌ಮಸ್‌ಗೆ ಸಂಭ್ರಮದ ಚಾಲನೆ

| Published : Dec 25 2023, 01:30 AM IST / Updated: Dec 25 2023, 01:31 AM IST

ಕರಾವಳಿಯಲ್ಲಿ ವಿಶೇಷ ಬಲಿಪೂಜೆಯೊಂದಿಗೆ ಕ್ರಿಸ್‌ಮಸ್‌ಗೆ ಸಂಭ್ರಮದ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆಯ ಮೂಲಕ ಕ್ರಿಸ್‌ಮಸ್‌ಗೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಬಲಿಪೂಜೆಯಲ್ಲಿ ಸಡಗರದಿಂದ ಭಾಗವಹಿಸಿದರು. ಹಬ್ಬದ ಅಂಗವಾಗಿ ವಿಶೇಷ ಕ್ರಿಸ್ಮಸ್‌ ಕ್ಯಾರೆಲ್ಸ್‌ (ಕ್ರಿಸ್ಮಸ್‌ ಗೀತೆ)ಗಳನ್ನು ಹಾಡಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯೇಸು ಕ್ರಿಸ್ತರ ಜನ್ಮದಿನ ಆಚರಣೆಯ ಕ್ರಿಸ್‌ಮಸ್‌ಗೆ ಡಿ.24ರಂದು ಸಂಜೆ ಕರಾವಳಿಯಲ್ಲಿ ವಿಶೇಷ ಬಲಿಪೂಜೆಯ ಮೂಲಕ ಸಂಭ್ರಮದ ಚಾಲನೆ ದೊರೆತಿದೆ.

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚಚ್‌ರ್ಗಳಲ್ಲಿ ಭಾನುವಾರ ವಿಶೇಷ ಬಲಿಪೂಜೆ ನೆರವೇರಿಸಲಾಯಿತು. ನಗರದ ರೊಸಾರಿಯೋ ಕೆಥೆಡ್ರಲ್‌, ಮಿಲಾಗ್ರಿಸ್‌, ಲೇಡಿಹಿಲ್‌, ಅಶೋಕನಗರ, ಕೂಳೂರು, ಬೆಂದುರ್‌ ಇತ್ಯಾದಿ ಪ್ರಮುಖ ಚಚ್‌ರ್ಗಳಲ್ಲಿ ಸಾವಿರಾರು ಭಕ್ತರು ಬಲಿಪೂಜೆಯಲ್ಲಿ ಸಡಗರದಿಂದ ಭಾಗವಹಿಸಿದರು. ಹಬ್ಬದ ಅಂಗವಾಗಿ ವಿಶೇಷ ಕ್ರಿಸ್ಮಸ್‌ ಕ್ಯಾರೆಲ್ಸ್‌ (ಕ್ರಿಸ್ಮಸ್‌ ಗೀತೆ)ಗಳನ್ನು ಹಾಡಿ ಸಂಭ್ರಮಿಸಿದರು.

ಪ್ರೀತಿ, ಕ್ಷಮೆ, ವಿನಯತೆ ಇರಲಿ- ಬಿಷಪ್‌:

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಡಾ.ಪೀಟರ್‌ ಪಾವ್ಲ್‌ ಸಲ್ದಾನ ಅವರು ರೊಸಾರಿಯೋ ಕೆಥೆಡ್ರಲ್‌ನಲ್ಲಿ ಕ್ರಿಸ್‌ಮಸ್‌ ಬಲಿಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭ ಕ್ರಿಸ್‌ಮಸ್‌ ಸಂದೇಶ ನೀಡಿದ ಬಿಷಪ್‌, ಎಲ್ಲರನ್ನು ಪ್ರೀತಿಸುವುದು, ತಾಳ್ಮೆ, ಕುಟುಂಬ ವ್ಯವಸ್ಥೆಯಲ್ಲಿ ಅನ್ಯೋನ್ಯತೆ, ಕ್ಷಮೆ, ವಿನಯತೆಯಂತಹ ವಿಚಾರಗಳನ್ನು ಮೈಗೂಡಿಸಿಕೊಂಡು ದೇವರೊಂದಿಗೆ ಬದುಕು ಸಾಗಿಸಬೇಕಿದೆ. ಸಾಮಾನ್ಯರಂತೆ ಹುಟ್ಟಿದ ಯೇಸು ಕ್ರಿಸ್ತರು ಸರಳತೆ, ಪ್ರೀತಿ, ಶಾಂತಿಯನ್ನು ಜಗತ್ತಿಗೇ ಸಾರಿದವರು. ಅವರಂತೆ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಲಿಪೂಜೆಯ ಬಳಿಕ ಕ್ರಿಸ್‌ಮಸ್‌ ಮನೋರಂಜನಾ ಕಾರ್ಯಕ್ರಮಗಳು, ಸಾಂತಾಕ್ಲಾಸ್‌ ಅವರಿಂದ ಸಿಹಿ ತಿನಿಸುಗಳ ಹಂಚಿಕೆ ನಡೆಯಿತು. ಎಲ್ಲರೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಇಂದು ವಿಶೇಷ ಬಲಿಪೂಜೆ:

ಡಿ.25ರಂದು ನಗರದ ತಣ್ಣೀರುಬಾವಿಯ ಚಚ್‌ರ್ನಲ್ಲಿ ವಿಶೇಷ ಬಲಿಪೂಜೆಯನ್ನು ಬಿಷಪ್‌ ನೆರವೇರಿಸಲಿದ್ದಾರೆ. ಕರಾವಳಿಯ ವಿವಿಧ ಚಚ್‌ರ್ಗಳಲ್ಲಿ ಒಂದಕ್ಕಿಂತ ಹೆಚ್ಚು ವಿಶೇಷ ಪೂಜೆಗಳು ನಡೆಯಲಿವೆ. ಕ್ರಿಸ್‌ಮಸ್‌ ಆಚರಣೆಗಾಗಿ ಎಲ್ಲ ಚಚ್‌ರ್ಗಳಲ್ಲಿ ವಿಶೇಷ ದೀಪಾಲಂಕಾರ, ಗೋದಲಿಗಳು ನಿರ್ಮಾಣವಾಗಿವೆ. ಚರ್ಚ್‌ಗಳು ಮಾತ್ರವಲ್ಲದೆ, ಮನೆಗಳಲ್ಲೂ ಗೋದಲಿಗಳನ್ನು ನಿರ್ಮಿಸಿ ಕ್ರೈಸ್ತ ಬಾಂಧವರು ಸಂಭ್ರಮಿಸಿದರು. ಕನ್ನಡಪ್ರಭ ವಾರ್ತೆ

ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.

ದೀಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಅಧಿಕೃತ ಚರ್ಚ್‌ ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರದಲ್ಲಿ ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದರು.

ನಮ್ಮೆಲ್ಲರನ್ನು ಪ್ರೀತಿಸುವುದಕ್ಕಾಗಿ ಭುವಿಗೆ ಆಗಮಿಸಿದ ಯೇಸು ಸ್ವಾಮಿ ದನದ ಕೊಟ್ಟಿಗೆಯಾದ ಗೋದಲಿಯಲ್ಲಿ ಜನಿಸಿ ತನ್ನ ಸರಳತೆ ಮೆರೆದರು. ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ಕ್ರಿಸ್ತ ಜಯಂತಿ ಶಾಂತಿಯನ್ನು ಹಂಚುವ ಹಬ್ಬವಾಗಿದ್ದು ಜಗತ್ತಿನೆಲ್ಲೆಡೆ ಸದಾ ಶಾಂತಿ ನೆಲೆಸುವಂತೆ ಪ್ರಾರ್ಥಿಸಬೇಕು ಎಂದವರು ತಿಳಿಸಿದರು.

ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ರೆಕ್ಟರ್ ವಂ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ|ಜೋಯ್ ಅಂದ್ರಾದೆ, ಕಟಪಾಡಿ ಹೋಲಿ ಕ್ರಾಸ್ ಸಭೆಯ ವಂ. ರೊನ್ಸನ್ ಡಿಸೋಜಾ ಉಪಸ್ಥಿತರಿದ್ದರು. ಬಲಿಪೂಜೆಗೂ ಮುನ್ನ ಯೇಸು ಸ್ವಾಮಿಯ ಜನನದ ವೃತ್ತಾಂತವನ್ನು ನಟನೆ ಮತ್ತು ನೃತ್ಯರೂಪಕದ ಮೂಲಕ ಚರ್ಚಿನ ಮಕ್ಕಳು ಪ್ರದರ್ಶಿಸಿದರು.