ಸಾರಾಂಶ
ಶಿವಮೊಗ್ಗ: ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಆ.11 ರಿಂದ 14ರವರೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಚುಂಚಾದ್ರಿ ಕಪ್ 23ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ಆಂಗ್ಲ ಶಾಲೆಯ ಪ್ರಾಂಶುಪಾಲರಾದ ದಿವ್ಯ ಕರಣಂ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 22 ವರ್ಷಗಳಿಂದ ಚುಂಚಾದ್ರಿ ಕಪ್ ಅನ್ನು ನಾವು ನಡೆಸುತ್ತಾ ಬಂದಿದ್ದೇವೆ. ಈ ಬಾರಿಯೂ ಆ.11ರಿಂದ 14ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಆಹ್ವಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಸುಮಾರು 64ಕ್ಕೂ ಹೆಚ್ಚು ಬಾಲಕ-ಬಾಲಕಿಯರ ತಂಡಗಳು ನೋಂದಣೆ ಮಾಡಿಸಿಕೊಂಡಿವೆ. ಇದಕ್ಕಾಗಿ ವಸತಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾಗೂ 23ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಆ.14ರಂದು ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಶ್ರೀ ಸಾನ್ನಿಧ್ಯ ವಹಿಸಲಿದ್ದು, ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತಿ ವಹಿಸುವರು ಎಂದರು.
ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಬಾಲಕ, ಬಾಲಕಿಯರಿಗೆ "ಬೆಸ್ಟ್ ಅಟ್ಯಾಕರ್, ಬೆಸ್ಟ್ ಬೂಸ್ಟರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಲೀಬ್ರೋ " ಸೆಂಟರ್ ಬ್ಲಾಕರ್ ಈ ಪ್ರಶಸ್ತಿಗಳನ್ನು ನೀಡಿ ಕ್ರೀಡಾ ಪಟುಗಳನ್ನು ಹುರಿದುಂಬಿಸಲಾಗುತ್ತಿದೆ, ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕದೊಂದಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿದೆ. ಈ ಬಾರಿ ಬಾಲಕಿಯರ ವಿಭಾಗದಲ್ಲಿ 32ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸುತ್ತಿರುವುದರಿಂದ ಈ ಬಾರಿಯೂ ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದ ಬಾಲಕಿಯರ ತಂಡಕ್ಕೆ ನಗದು ಬಹುಮಾನ ನೀಡುತ್ತಿರುವುದು ಮತ್ತೊಂದು ವಿಶೇಷ ಎಂದು ಅವರು, ಪಂದ್ಯಾವಳಿಗಾಗಿ ಈಗಾಗಲೇ ನಾಲ್ಕು ಅಂಕಣಗಳಲ್ಲಿ ಸಿದ್ಧಪಡಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಗುತ್ತಿದ್ದು, ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ 5000 ರು. ದ್ವಿತೀಯ ಸ್ಥಾನ 4000 ರು. ತೃತೀಯ ಸ್ಥಾನ 3000 ರು. ಮತ್ತು ನಾಲ್ಕನೇ ಸ್ಥಾನ 2000 ರು. ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 5000 ರು. ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 4000 ರು. ತೃತೀಯ ಸ್ಥಾನ 3000 ರು. ಮತ್ತು ನಾಲ್ಕನೇ ಸ್ಥಾನ 2000 ರು. ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಮಾಹಿತಿ ನೀಡಿದರು.
14ಕ್ಕೆ ಓಟದ ಸ್ಪರ್ಧೆ:ಅಥ್ಲೇಟಿಕ್ ಕ್ಲಬ್ಬಿನ ಅಧ್ಯಕ್ಷ ಉದಯ್‌ಕುಮಾರ್ ಮಾತನಾಡಿ, ಇದೇ ಸಂದರ್ಭದಲ್ಲಿ ಬಾಲಕ-ಬಾಲಕಿಯರಿಗಾಗಿ ರಸ್ತೆ ಓಟದ ಸ್ಪರ್ಧೆಯನ್ನು, ಆ.೧೪ ರಂದು ಆಯೋಜಿಸಲಾಗಿದೆ. ನೆಹರೂ ಕ್ರೀಡಾಂಗಣದಿಂದ ಪ್ರಾರಂಭವಾಗುವ ಈ ಓಟದ ಸ್ಪರ್ಧೆ ಬೆಳಗ್ಗೆ ೬ಕ್ಕೆ ಆರಂಭವಾಗುತ್ತದೆ. ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಆವರಣದಲ್ಲಿ ಕೊನೆಗೊಳ್ಳುತ್ತದೆ. ಪ್ರಾಥಮಿಕ ಶಾಲಾ ಬಾಲಕಿಯರಿಗೆ ೨ಕಿ.ಮೀ. ಬಾಲಕರಿಗೆ ೩ಕಿ.ಮೀ. ಹಾಗೂ ಪ್ರೌಢಶಾಲಾ ಬಾಲಕರಿಗೆ ೫ ಕಿ.ಮೀ. ಸ್ಪರ್ಧೆ ನಡೆಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಜಿ.ಕಾಮತ್, ಸಂಸ್ಥೆಯ ನಿರ್ದೇಶಕ ಕೊಳಿಗೆ ವಾಸಪ್ಪಗೌಡ. ಗುರುಪುರದ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಸುರೇಶ.ಎಸ್.ಎಚ್., ಹಿರೇಮಠ್, ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು.