ಕಡಲೇ ಕಾಯಿ ಪರಿಷೆ ಪ್ರಯುಕ್ತ ಮೊದಲು ಜಡಲತಿಮ್ಮನಹಳ್ಳಿ ಗ್ರಾಮದಿಂದ ವೀರಾಂಜನೇಯ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮುತ್ತಿನ ಪಲ್ಲಕ್ಕಿಯೊಂದಿಗೆ ಬೆಂಗಳೂರು ರಸ್ತೆಯ ಮೂಲಕ ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ ಮತ್ತಿತರ ಸಾಂಸ್ಕೃತಿಕ ಕಲಾ ಮೇಳಗಳೊಂದಿಗೆ ವೀರಾಂಜನೇಯಸ್ವಾಮಿ ದೇವಾಲಯದವರೆಗೂ ಮೆರವಣಿಗೆ ನಡೆಸಲಾಯಿತು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಎದುರು ಸೂಲಾಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀ ವೀರಾಂಜನೆಯಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಡಲೇಕಾಯಿ ಪರಿಷೆ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.ಕಡಲೇ ಕಾಯಿ ಪರಿಷೆ ಪ್ರಯುಕ್ತ ಮೊದಲು ಜಡಲತಿಮ್ಮನಹಳ್ಳಿ ಗ್ರಾಮದಿಂದ ವೀರಾಂಜನೇಯ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮುತ್ತಿನ ಪಲ್ಲಕ್ಕಿಯೊಂದಿಗೆ ಬೆಂಗಳೂರು ರಸ್ತೆಯ ಮೂಲಕ ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ ಮತ್ತಿತರ ಸಾಂಸ್ಕೃತಿಕ ಕಲಾ ಮೇಳಗಳೊಂದಿಗೆ ಶ್ರೀ ಆದಿಚುಂಚನಗಿರಿ ಶಾಖಾ ಮಠದವರೆಗೂ ತಂದು ನಂತರ ಮಠದಿಂದ ಮುಂಭಾಗದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದವರೆಗೂ ಮೆರವಣಿಗೆ ನಡೆಸಲಾಯಿತು.
ಭಕ್ತರಿಗೆ ಕಡಲೆಕಾಯಿ ಪೊಟ್ಟಣಈ ವೇಳೆ ಮುತ್ತಿನ ಪಲ್ಲಕ್ಕಿಯಲ್ಲಿ ತಂದಿದ್ದ ವೀರಾಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ದೇವಾಲಯದಲ್ಲಿ ವೀರಾಂಜನೇಯಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಳಿಕ ಭಕ್ತಾದಿಗಳತ್ತ ಕಡಲೆಕಾಯಿ ಪೊಟ್ಟಣಗಳನ್ನು ತೂರಿ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು.
ಸಂಗೀತ ಕಾರ್ಯಕ್ರಮ: ಇದಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 7ಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಆದಿಚುಂಚನಗಿರಿ ಶಾಖಾ ಮಠದ ಸಾಯಿಕೀರ್ತಿನಾಥ ಸ್ವಾಮೀಜಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 2 ರಿಂದ 4ರವರೆಗೆ ಆದಿಚುಂಚನಗಿರಿ ಮಠ ಮತ್ತು ಜಡಲತಿಮ್ಮನಹಳ್ಳಿ ಗ್ರಾಮಸ್ಥರಿಂದ ದೇವರ ಉತ್ಸವ ಮತ್ತು ಪಾನಕ ಸೇವೆ ನಡೆಯಿತು. ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.ಕಡಲೆಕಾಯಿ ಪರಿಷೆಯಲ್ಲಿ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ, ಜಡಿಲತಿಮ್ಮನಹಳ್ಳಿಯ ಗ್ರಾಮಸ್ಥರಾದ ಶಂಕರ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ನಿರ್ವಾಹಣಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ, ಎಸ್ ಜೆಸಿಐಟಿ ಪ್ರಾಂಶುಪಾಲ ಡಾ. ಜಿ. ಟಿ ರಾಜು,ಆಡಳಿತಾಧಿಕಾರಿ ರಂಗಸ್ವಾಮಿ, ಕುಲಸಚಿವ ಜೆ.ಸುರೇಶ,ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್, ಎಲ್ಲಾ ಶಾಖಾ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಈ ವೇಳೆ ಉಪಸ್ಥಿತರಿದ್ದ ಚುಂಚಶ್ರೀಗಳು ಭಕ್ತರಿಗೆ ಆರ್ಶೀವಾದಿಸಿದರು.