ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣ ಸಂಬಂಧ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕೃತವಾಗಿ ಬುಧವಾರ ತನಿಖೆ ಶುರು ಮಾಡಿದೆ.

ಈ ಪ್ರಕರಣದ ಪತ್ತೆದಾರಿಕೆಗೆ ಎಸ್‌ಪಿ ರಾಘವೇಂದ್ರ ಹೆಗಡೆ ಸಾರಥ್ಯದಲ್ಲಿ ತನಿಖಾ ತಂಡವನ್ನು ಸಿಐಡಿ ಡಿಜಿಪಿ ಪ್ರಣವ್‌ ಮೊಹಂತಿ ರಚಿಸಿದ್ದಾರೆ. ವಾಲ್ಮೀಕಿ ನಿಗಮದ ಬಹುಕೋಟಿ ವಂಚನೆ, ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಹಾಗೂ 2011ರ ಕೆಪಿಎಸ್‌ಸಿ ನೇಮಕಾತಿ ಹಗರಣ ಸೇರಿ ಹಲವು ಪ್ರಮುಖ ಪ್ರಕರಣಗಳ ತನಿಖಾ ತಂಡದಲ್ಲಿ ರಾಘವೇಂದ್ರ ಹೆಗಡೆ ಕಾರ್ಯನಿರ್ವಹಿಸಿದ್ದು, ಇಲಾಖೆಯಲ್ಲಿ ಎಸ್‌ಐಟಿ ಸ್ಪೆಷ್ಪಲಿಸ್ಟ್ ಎಂದೇ ಅವರು ಗುರುತಿಸಿಕೊಂಡಿದ್ದಾರೆ. ಈಗ ಮತ್ತೆ ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆ ಹೊಣೆಗಾರಿಕೆಯನ್ನು ರಾಘವೇಂದ್ರ ಹೆಗಡೆ ಅವರ ಹೆಗಲಿಗೆ ಬಿದ್ದಿದೆ. ಸಿಐಡಿಗೆ ವರ್ಗಾವಣೆಯಾಗಿರುವ ಎರಡು ಎಫ್ಐಆರ್‌ಗಳ ಆಧರಿಸಿ ತನಿಖೆ ಆರಂಭವಾಗಿದೆ. ಈ ಎರಡು ಪ್ರಕರಣಗಳಿಗೆ ಡಿವೈಎಸ್ಪಿಗಳಾದ ಗೀತಾ ಹಾಗೂ ಶ್ರೀನಿವಾಸ್ ರಾಜು ಅವರು ತನಿಖಾಧಿಕಾರಿಗಳಾಗಿ ನೇಮಕಗೊಂಡಿದ್ದು, ಅವರ ಮೇಲುಸ್ತುವಾರಿಯಾಗಿ ಎಸ್ಪಿ ರಾಘವೇಂದ್ರ ಹೆಗಡೆ ನಿಯೋಜನೆಗೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.ಶಿವಶಂಕರಪ್ಪ ಗ್ಯಾಂಗ್‌ಗೆ ಬಿಸಿ:

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಗಳ ಸಂಬಂಧ ವಿಧಾನಸೌಧ ಠಾಣೆಗೆ ತೆರಳಿ ಎಫ್‌ಐಆರ್ ಸೇರಿದಂತೆ ಕೆಲ ಕಡತಗಳನ್ನು ಸಿಐಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ದಾಖಲೆಗಳ ಪರಿಶೀಲನೆ ಬಳಿಕ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಅವರ ಮಗಳು ಸೇರಿದಂತೆ ಇತರರಿಗೆ ನೋಟಿಸ್ ನೀಡಿ ವಿಚಾರಣೆಗೆ ಸಿಐಡಿ ಕರೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.