ಸಾರಾಂಶ
- ರಾಜಸ್ಥಾನದ ಜಾಲೂರು ಜಿಲ್ಲೆ ಮಾಂಡವಾಲ ಗ್ರಾಮದ ಜೀತೇಂದ್ರಕುಮಾರ್ ಆರೋಪಿ - ಯುನೈಟೆಡ್ ಟ್ರೇಡಿಂಗ್ ಕಂಪೆನಿ ಕಟ್ಟಡದಲ್ಲಿ ₹೧೭ ಲಕ್ಷದ ಸಿಗರೇಟ್ ಬಾಕ್ಸ್‌ಗಳ ಕದ್ದಿದ್ದರು- - -
ಕನ್ನಡಪ್ರಭ ವಾರ್ತೆ ಸಾಗರ ಪಟ್ಟಣದ ಯುನೈಟೆಡ್ ಟ್ರೇಡಿಂಗ್ ಕಂಪನಿಯಲ್ಲಿ ೨೦೨೩ರ ಮೇ ತಿಂಗಳಲ್ಲಿ ನಡೆದಿದ್ದ ೧೭ ಲಕ್ಷ ಮೊತ್ತದ ಸಿಗರೇಟ್ ತುಂಬಿದ್ದ ಬಾಕ್ಸ್ ಕಳವು ಪ್ರಕರಣದಲ್ಲಿ ಓರ್ವ ಅಂತರ ರಾಜ್ಯ ಕಳ್ಳನನ್ನು ಬಂಧಿಸಿರುವ ಪೇಟೆ ಠಾಣೆ ಪೋಲಿಸರು, ₹೬ ಲಕ್ಷ ವಶ ಪಡಿಸಿಕೊಂಡು, ಉಳಿದ ಮೂವರಿಗೆ ಹುಡುಕಾಟ ನಡೆಸಿದ್ದಾರೆ.ರಾಜಸ್ಥಾನದ ಜಾಲೂರು ಜಿಲ್ಲೆಯ ಮಾಂಡವಾಲ ಗ್ರಾಮದ ನಿವಾಸಿ ಜೀತೇಂದ್ರಕುಮಾರ್ (೨೭) ಆರೋಪಿ. ಪಿಎಸ್ಐಗಳಾದ ಮಹೇಶಕುಮಾರ್, ಸಂತೋಷ್ ಬಾಗೋಜಿ ಮತ್ತು ಲಕ್ಷ್ಮಣ ಮೊದಲಾದವರಿದ್ದ ತನಿಖಾ ತಂಡವು ಜೀತೇಂದ್ರಕುಮಾರ್‌ನನ್ನು ದಸ್ತಗಿರಿ ಮಾಡಿ, ಸಿಗರೇಟ್ ಮಾರಾಟ ಮಾಡಿ ಹಂಚಿಕೊಂಡಿದ್ದ ₹೬ ಲಕ್ಷವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ:ಕಳೆದ ವರ್ಷ ಮೇ ತಿಂಗಳ ೧೪ರಂದು ಪಟ್ಟಣದ ಸೊರಬ ರಸ್ತೆಯ ಯುನೈಟೆಡ್ ಟ್ರೇಡಿಂಗ್ ಕಂಪೆನಿ ಕಟ್ಟಡದ ಹಿಂದಿನ ಬಾಗಿಲು ಒಡೆದು ಅಲ್ಲಿದ್ದ ₹೧೭ ಲಕ್ಷ ಮೌಲ್ಯದ ಸಿಗರೇಟ್ ತುಂಬಿದ್ದ ಬಾಕ್ಸ್‌ಗಳನ್ನು ಕಳವು ಮಾಡಲಾಗಿತ್ತು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಆಧರಿಸಿ, ತನಿಖೆ ಪ್ರಾರಂಭಿಸಿದ್ದ ಪೊಲೀಸರಿಗೆ ವಾಹನದ ನಂಬರ್ ದೊರೆತಿತ್ತು. ಇದರ ಜಾಡು ಹಿಡಿದು, ಮಾಲೀಕರನ್ನು ಪ್ರಶ್ನಿಸಿದರು. ಆಗ ಹುಬ್ಬಳ್ಳಿಯಲ್ಲಿ ಬಾಡಿಗೆಗೆ ಬಂದಿದ್ದ ರಾಜಸ್ಥಾನ ಮೂಲದ ಮೂವರು ಯುವಕರು ಕಾರನ್ನು ಪಡೆದು, ಮಾಲೀಕನನ್ನು ಹೋಟೆಲ್‌ನಲ್ಲಿ ಬಿಟ್ಟು ಸಾಗರಕ್ಕೆ ಬಂದು, ಕಳವು ಮಾಡಿ ಪರಾರಿಯಾಗಿದ್ದಾಗಿ ತಿಳಿದುಬಂದಿದೆ.
ಇದಕ್ಕೂ ಮೊದಲೇ ಆರೋಪಿಗಳು ಸಾಗರಕ್ಕೆ ಬಂದು ಹೋಲ್‌ಸೇಲ್ ಸಿಗರೇಟು ಮಾರುವವರು ಯಾರಿದ್ದಾರೆ, ಅವರಲ್ಲಿ ಎಷ್ಟು ಮಾಲಿದೆ ಎನ್ನುವುದೆಲ್ಲದರ ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ. ಕದ್ದಿದ್ದ ಸಿಗರೇಟನ್ನು ಮಾರಾಟ ಮಾಡಿ, ಬಂದ ಹಣವನ್ನು ಎಲ್ಲರೂ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜಸ್ಥಾನ ಮೂಲದ ನಾಲ್ವರ ತಂಡ ರಾಜ್ಯದ ಬಿಜಾಪುರ, ಸಿಂಧಗಿ, ಸವದತ್ತಿ ಮೊದಲಾದೆಡೆ ಹೀಗೆಯೇ ಹೋಲ್‌ಸೇಲ್ ಸಿಗರೇಟ್ ಮಾರಾಟ ಮಾಡುವವರನ್ನು ದೋಚಿರುವುದು ಇದೇ ವೇಳೆ ಪತ್ತೆಯಾಗಿದೆ.
- - - -ಸಿಗರೇಟ್.ಜೆಪಿಜಿ:(-ಸಾಂದರ್ಭಿಕ ಚಿತ್ರ)