ಸಾರಾಂಶ
ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕಾನೂನು ರೂಪಿಸಬೇಕಿದೆ.
ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಒಂಟಿ ಮಹಿಳೆಯರು ಸಾಮಾಜಿಕ, ಧಾರ್ಮಿಕ, ಆರ್ಥಿಕ ಪರಿಸ್ಥಿತಿಗಳಿಂದಾಗಿ ಸಂಕಷ್ಟದಲ್ಲಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಾಗದೇ ಅನೇಕ ಸಂಕಷ್ಟಗಳಿಗೆ ಗುರಿಯಾಗಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗಂಗಾಮತ ಸಮುದಾಯ ಭವನದಲ್ಲಿ ನಡೆದ ಒಂಟಿ ಮಹಿಳೆಯರ ತಾಲೂಕು ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.ಒಂಟಿ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು. ಸರ್ಕಾರ ಕೂಡಲೇ ₹3000 ಮಾಸಿಕ ಪಿಂಚಣಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಬೇಕು. ಒಂಟಿ ಮಹಿಳೆಯರ ಶೋಷಣೆ ತಪ್ಪಿಸಲು ಸೂಕ್ತ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ರಾಜ್ಯ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕಾನೂನು ರೂಪಿಸಬೇಕಿದೆ. ಪತಿ ಕಳೆದುಕೊಂಡ ಪತ್ನಿಯರಿಗೆ ಆಸ್ತಿ ಹಕ್ಕು ಸಮಪರ್ಕವಾಗಿ ದಕ್ಕುತ್ತಿಲ್ಲ. ಒಂಟಿ ಮಹಿಳೆಯರ ಸ್ವಾವಲಂಬನೆಗೆ ಪೂರಕವಾಗಿ ಬಡ್ಡಿರಹಿತ ಸಾಲಸೌಲಭ್ಯ ಕಲ್ಪಿಸಬೇಕು. ಒಂಟಿ ಮಹಿಳೆಯರಿಗೆ ವಸತಿ ಮತ್ತು ನಿವೇಶನ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.ಸಂಘದ ಬಾಚಿಗೊಂಡನಹಳ್ಳಿ ಹುಲಿಗೆಮ್ಮ ಅಧ್ಯಕ್ಷತೆ ವಹಿಸಿದ್ದರು.ಸಂಘದ ಗೌರವ ಸಲಹೆಗಾರ ಯು.ಬಸವರಾಜ ಉದ್ಘಾಟಿಸಿ ಮಾತನಾಡಿದರು.ಒಂಟಿ ಮಹಿಳೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.ಸಂಘಟನೆಯ ದೊಡ್ಡಬಸಮ್ಮ, ತಿಮ್ಮಕ್ಕ, ಮಾಳಿಗಿ ಅಂಜಿನಮ್ಮ, ಗೀತಾ, ರೇಖಾ, ಕಮಲಮ್ಮ, ಶಿವಮ್ಮ, ಸುಲೋಚನಮ್ಮ, ಮಹೇಶ್ವರಿ, ದುರುಗಮ್ಮ, ಗೀತಾ ಇತರರಿದ್ದರು. ಸಿಐಟಿಯು ತಾಲೂಕು ಅಧ್ಯಕ್ಷ ಎಸ್.ಜಗನ್ನಾಥ್, ಸಂಘಟನೆಯ ಚಾಂದ್‌ಬಿ, ಲಕ್ಷ್ಮೀದೇವಿ ನಿರ್ವಹಿಸಿದರು.