ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸಿನಿಮಾದ ಮೂಲ ಸಾಮಾಗ್ರಿಯನ್ನು ಅರ್ಥ ಮಾಡಿಕೊಂಡರೆ ಸಿನಿಮಾ ವೀಕ್ಷಿಸುವ ದೃಷ್ಟಿಕೋನ ಬದಲಾಗಿ, ಕಥೆಯಿಂದ ವಿಚಾರ ಹೇಳುವ ಸಾಧನವಾಗಿ ಸಿನಿಮಾ ಸಮಾಜವನ್ನು ಆಳವಾಗಿ ಮುಟ್ಟಲಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಶುಕ್ರವಾರ ಹಮ್ಮಿಕೊಂಡಿದ್ದ ಐದು ದಿನಗಳ ‘ಸಿನಿ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಿನಿಮಾವನ್ನು ಮನೋರಂಜನೆಯಿಂದ ಪ್ರಜ್ಞೆಯನ್ನು ತಿಳಿಗೊಳಿಸುವ ಸಾಧನವಾಗಿಸಬೇಕಾದರೆ ಸಿನಿಮಾ ಉನ್ನತ ಅಧ್ಯಯನ ಶಿಕ್ಷಣದ ಭಾಗವಾಗಬೇಕು. ನಮ್ಮ ಸುತ್ತಲು ನಡೆಯುವ ಕಥೆಯೇ ಸಿನಿಮಾವಾಗಿರುತ್ತದೆ. ಕಲ್ಪನಾ ಲೋಕದಲ್ಲಿ ತೇಲಿಸುವ ಸಿನಿಮಾಗಳು ಅರಿವನ್ನು ಮೂಡಿಸುವುದಿಲ್ಲ ಎಂದು ಹೇಳಿದರು.ಸಮಾಜದ ಓರೆಕೋರೆಗಳನ್ನು ಚಿತ್ರಿಸುವ, ಪ್ರಭುತ್ವವನ್ನು ಪ್ರಶ್ನಿಸಿ, ಪಶ್ನಿಸುವಂತೆ ಪ್ರೇರೇಪಿಸುವ ಸಿನಿಮಾಗಳಿಗೆ ಸರ್ಕಾರ ಪ್ರಶಸ್ತಿ ಕೊಟ್ಟು ಸುಮ್ಮನಾಗಿಸುತ್ತದೆ. 1896 ರಲ್ಲಿ ಹುಟ್ಟಿದ ಸಿನಿಮಾ ಪ್ರಸ್ತುತ ದಾಪುಗಾಲಿಟ್ಟು ಓಡುತ್ತಿದೆ. ಮನುಷ್ಯ ಜೀವನದಲ್ಲಿ ಆದ ಬದಲಾವಣೆಗಳನ್ನು, ತಲ್ಲಣಗಳನ್ನು ಒಳಗೊಳ್ಳುವುದೇ ಸಿನಿಮಾ ಎಂದು ಇಷ್ಟು ವರ್ಷವೂ ನಿರೂಪಿಸಿದೆ ಎಂದರು.
ಸಿನಿಮಾದಲ್ಲಿ ಕಥೆಗಿಂತಲೂ ಮುಖ್ಯವಾದದ್ದು ನಿರ್ದೇಶಕ ಯಾವ ರೀತಿ ಕಥೆ ಬಳಸಿಕೊಂಡು, ಸಮಾಜಕ್ಕೆ ಪ್ರಜ್ಞೆಯನ್ನು ಸೃಷ್ಟಿಸುತ್ತಾನೆಂಬುದು. ಸಿನಿಮಾದಲ್ಲಿ ದುಡಿಯಲೂಬಹುದು, ದುರ್ಬಳಕೆಯನ್ನೂ ಮಾಡಿಕೊಳ್ಳಬಹುದು. 120 ವರ್ಷಗಳ ಸಿನಿಮಾ ಇತಿಹಾಸದಲ್ಲಿ 30 ವರ್ಷಗಳಿಗೊಮ್ಮೆ ಆಗುತ್ತಿರುವ ಸಿನಿಮಾ ಚಳವಳಿಯನ್ನು ಗಮನಿಸಿದರೆ ಕಥೆಯನ್ನು ಗಟ್ಟಿಯಾಗಿ ಹೇಳುವುದರಿಂದ ಶುರುವಾಗಿ ಕಥೆ ಹೇಳದೆ ಪ್ರಶ್ನಿಸುವಂತೆ ಮಾಡುವುದು, ಇತರೆ ರಂಗಗಳ ಕಲೆಯನ್ನು ಇಲ್ಲಿ ತೋರಿಸುವುದಕ್ಕೆ 19ನೆಯ ಶತಮಾನದ ಕೊನೆಯಲ್ಲಿ ನಿಂತ ಚಳವಳಿ, ಪ್ರಸ್ತುತ ಕಾಲವನ್ನು ಹಿಡಿಯುವ ಸಾಧನವಾಗಿ ಬದಲಾಗಿದೆ ಎಂದು ತಿಳಿಸಿದರು.ಶ್ರೇಷ್ಠ ಸಿನಿಮಾಗಳು ಬಂದಿದ್ದು ಯುರೋಪ್ ದೇಶದಿಂದ. ಉತ್ತಮ ಸಿನಿಮಾಗಳು ಬರುತ್ತಿರುವುದು ಏಷ್ಯಾ ಭಾಗದಿಂದ ಮತ್ತು ತೃತೀಯ ಜಗತ್ತಿನ ರಾಷ್ಟ್ರಗಳಿಂದ. ಸಿನಿಮಾವನ್ನು ‘ರಾಜಕೀಯ’ದೃಷ್ಟಿಕೋನದಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಉನ್ನತ ಶಿಕ್ಷಣದ ಅಧ್ಯಯನದ ಭಾಗವಾಗಿ ಸಿನಿಮಾ ವಿಷಯವನ್ನು ಕಲಿಯಲು ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್‌ನಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕದ ಇತರೆ ವಿವಿಗಳಿಗೆ ಮಾದರಿಯಾಗುವಂತಹ ಸಿನಿಮಾ ಕೋರ್ಸ್, ಸ್ಟುಡಿಯೋ ಸ್ಥಾಪಿಸಲು ವಿವಿ ನಿರ್ಧರಿಸಿದೆ. ಪ್ರಸ್ತುತ ವಿವಿಯ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಿನಿಮಾ ವಿಷಯವು ಅಧ್ಯಯನದ ಭಾಗವಾಗಿದೆ ಎಂದು ತಿಳಿಸಿದರು.‘ಎ’ ಸರ್ಟಿಫಿಕೇಟ್ ಮಾನ್ಯತೆ ಪಡೆಯುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸಾಹಿತ್ಯವು ಸಿನಿಮಾ ಆಗಿ ಬದಲಾಗುತ್ತಿದ್ದ ಕಾಲವಿತ್ತು. ಮನೋವಿಕಾಸದ ಬದಲು ಮನೋವಿಕೃತ ಥೀಮ್‌ಗಳ ಮೇಲೆ ಸಿನಿಮಾಗಳು ಬರುತ್ತಿವೆ. ಸಿನಿಮಾ ಯಶಸ್ಸು ನೂರರಿಂದ ಮೂರು ದಿನಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊನೆಯ ದಿನ ಅನನ್ಯಾ ಕಾಸರವಳ್ಳಿ ನಿರ್ದೇಶನದ ಹರಿಕಥಾ ಪ್ರಸಂಗ, ಅಮಿತ್‌ರಾಯ್ ನಿರ್ದೇಶನದ ರೋಡ್‌ಟು ಸಂಗಮ್‌ಚಿತ್ರ ಪ್ರದರ್ಶನ ಮಾಡಲಾಯಿತು. ಪ್ರದರ್ಶನವಾದ ಸಿನಿಮಾ ಕುರಿತು ನಿರ್ದೇಶಕಿ ಅನನ್ಯಾ ಕಾಸರವಳ್ಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿವಿಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು.