ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚಲನಚಿತ್ರ ಛಾಯಾಗ್ರಾಹಕರು ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಂಡು ಇತರರಿಗಿಂತ ಭಿನ್ನವಾಗಿ ಕೆಲಸ ಮಾಡಿದರೆ ಯಾವುದೇ ಸವಾಲುಗಳನ್ನು ಎದುರಿಸಬಹುದು ಎಂದು ಚಲನಚಿತ್ರ ಛಾಯಾಗ್ರಾಹಕ ಹಾಗೂ ನಿರ್ದೇಶಕ ಡಾ.ಅಶೋಕ್ ಕಶ್ಯಪ್ ಅಭಿಪ್ರಾಯಪಟ್ಟರು.ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಚಲನಚಿತ್ರ ಛಾಯಾಗ್ರಹಣದ ಇತ್ತೀಚಿನ ಪ್ರವೃತ್ತಿಗಳು’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಮೊಬೈಲ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಪ್ರತಿಯೊಬ್ಬರೂ ಛಾಯಾಗ್ರಾಹಕರಾಗಿದ್ದು, ಚಲನಚಿತ್ರ ಛಾಯಾಗ್ರಾಹಕರಿಗೆ ಅನೇಕ ಸವಾಲುಗಳಿವೆ ಎಂದರು.
ಎಲ್ಲಾ ಕ್ಷೇತ್ರಗಳಲ್ಲೂ ಡಿಜಿಟಲ್ ತಂತ್ರಜ್ಞಾನದ ಪ್ರಭಾವ ಆಗಿರುವಂತೆ ಚಲನಚಿತ್ರ ಕ್ಷೇತ್ರದಲ್ಲೂ ಸಾಕಷ್ಟು ಪ್ರಭಾವ ಆಗಿದೆ. ಹಿಂದೆ ಚಲನಚಿತ್ರ ಕ್ಷೇತ್ರದಲ್ಲಿ ಮುಂದುವರಿದ ದೇಶದ ತಂತ್ರಜ್ಞಾನವನ್ನು ಭಾರತದಲ್ಲಿ ಅಳವಡಿಸಬೇಕಾದರೆ ಹತ್ತಿಪ್ಪತ್ತು ವರ್ಷಗಳು ಬೇಕಾಗುತ್ತಿತ್ತು. ಆದರೆ ಇವತ್ತು ಡಿಜಿಟಲ್ ಕ್ರಾಂತಿಯಿಂದಾಗಿ ಯಾವುದೇ ತಂತ್ರಜ್ಞಾನವನ್ನು ಕ್ಷಣ ಮಾತ್ರದಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯವಾಗಿದೆ. ಇವತ್ತಿನ ಡಿಜಿಟಲ್ ತಂತ್ರಜ್ಞಾನದಿಂದಾಗಿ ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಯಾವುದೇ ಲೊಕೇಶನ್‍ಗೆ ಹೋಗದೆ ಸ್ಟುಡಿಯೊದಲ್ಲೇ ಕುಳಿತುಕೊಂಡು ಅದ್ಭುತ ಚಿತ್ರಗಳನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದರು.ಡಿಜಿಟಲ್ ತಂತ್ರಜ್ಞಾನದಿಂದಾಗಿ ಇಂದು ಚಲನಚಿತ್ರದ ಮಾರುಕಟ್ಟೆ ವಿಸ್ತಾರವಾಗಿದೆ. ಭಿನ್ನ ವೇದಿಕೆಗಳಲ್ಲಿ ಒಂದೇ ದಿನದ ಪ್ರದರ್ಶನದಲ್ಲಿ ಒಂದು ಚಲನಚಿತ್ರವು ತನ್ನ ಖರ್ಚನ್ನು ತುಂಬಿ ಲಾಭ ಗಳಿಸುವ ಮಟ್ಟಿಗೆ ಇಂದು ಚಲನಚಿತ್ರ ಮಾರುಕಟ್ಟೆ ಬೆಳೆದಿದೆ. ಅದನ್ನು ಬಳಸಿಕೊಳ್ಳುವ ಸಾಮರ್ಥ್ಯ ಹಾಗೂ ಕೌಶಲ್ಯ ಚಲನಚಿತ್ರ ನಿರ್ಮಾಪಕರಿಗೆ ಇರಬೇಕು. ಕೆಜಿಎಫ್, ಕಾಂತಾರದಂತಹ ಚಲನಚಿತ್ರಗಳು ಯಶಸ್ವಿಯಾಗಲು ಇದೇ ಕಾರಣ ಎಂದು ಅಭಿಪ್ರಾಯಿಸಿದರು.
ಚಲನಚಿತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಚಲನಚಿತ್ರದ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ಅಧ್ಯಯನ ಹಾಗೂ ಸಂಶೋಧನೆ ಮಾಡಬೇಕು. ಜಗತ್ತನ್ನು ಸುತ್ತಾಡುವುದರ ಜೊತೆಗೆ, ಜಗತ್ತಿನ ವಿವಿಧ ದೇಶಗಳ ಅಮೋಘ ಚಲನಚಿತ್ರಗಳ ಅಧ್ಯಯನ ಮಾಡಬೇಕು. ಯಾವುದೇ ಕಥೆಯನ್ನು ಭಿನ್ನವಾಗಿ ಬಿಂಬಿಸುವ ಪ್ರಯತ್ನ ಮಾಡಿದರೆ ಯಶಸ್ವಿ ಚಲನಚಿತ್ರ ಛಾಯಾಗ್ರಾಹಕರಾಗಬಹುದು ಎಂದು ಸಲಹೆ ನೀಡಿದರು.ತನ್ನ ಅನುಭವದ ನಿದರ್ಶನಗಳ ಮೂಲಕ ಬದಲಾಗುತ್ತಿರುವ ಚಲನಚಿತ್ರ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ವಿವರಿಸಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವಿಭಾಗದ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಅಂಡಿಂಜೆ ಸ್ವಾಗತಿಸಿ, ಪ್ರಾಧ್ಯಾಪಕ ಪ್ರೊ. ಪಿ.ಎ.ವರ್ಗೀಸ್ ವಂದಿಸಿದರು.ಚಿತ್ರದ ಗೆಲುವಿಗೆ ಕಥೆ, ಶೀರ್ಷಿಕೆ ಮುಖ್ಯಒಂದು ಚಲನಚಿತ್ರ ಯಶಸ್ವಿಯಾಗಲು ಒಂದು ಉತ್ತಮ ಕಥೆ ಹಾಗೂ ಶೀರ್ಷಿಕೆ ಮುಖ್ಯವಾಗುತ್ತದೆ. ಕಥೆ ಗಟ್ಟಿಯಾಗಿದ್ದರೆ ಅಭಿನಯ, ನಿರ್ದೇಶನ, ಛಾಯಾಗ್ರಹಣ ಮುಂತಾದ ಅಂಶಗಳು ತನ್ನಿಂದ ತಾನೆ ಗಟ್ಟಿಯಾಗುತ್ತವೆ. ಆದ್ದರಿಂದ ಚಲನಚಿತ್ರ ನಿರ್ಮಾಪಕರು ಚಲನಚಿತ್ರದ ವಿವಿಧ ಶಾಖೆಗಳಿಗೆ ಹೊಂದುವ ಗಟ್ಟಿ ಕಥೆಗಳನ್ನು ಆಯ್ಕೆ ಮಾಡಬೇಕೆಂದು ಚಲನಚಿತ್ರ ಛಾಯಾಗ್ರಾಹಕ ಡಾ.ಅಶೋಕ್ ಕಶ್ಯಪ್ ಕರೆ ನೀಡಿದರು.