ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಮೆರವಣಿಗೆ ಮೂಲಕ ಬಂದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ೨೦೨೪ ರ ಲೋಕಸಭಾ ಚುನಾವಣೆಗಳು ಮತ್ತೆ ಪ್ರಾರಂಭವಾಗುತ್ತಿದೆ. ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ೧೦ ವರ್ಷಗಳಾಗಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ೨ ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರು., ಡಾ. ಸ್ವಾಮಿನಾಥನ್ ರವರ ಶಿಫಾರಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ತಿಳಿಸಲಾಗಿತ್ತು. ಆದರೆ ಸಬ್ ಕಾ ಸಾಥ್ ಎಂದು ಜನಸಾಮಾನ್ಯರ ಕೊಂಡುಕೊಳ್ಳುವ ಸಾಮಾರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಿಸಿ, ಜನರಿಗೆ ೨೭೦೦ ಕ್ಯಾಲೋರಿ ಆಹಾರ ಪ್ರತಿದಿನ ಸಿಗದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಾಂಕದಲ್ಲಿ ೧೧೧ನೇ ಸ್ಥಾನಕ್ಕೆ ಕುಸಿದಿದೆ ಎಂದರು. ಆರ್ಥಿಕ ಬಿಕ್ಕಟ್ಟನ್ನು ಕರೋನಾ ಮುಂಚಿತವಾಗಿದ್ದ ಬೆಳವಣಿಗೆಗೆ ಹೋಲಿಸದೇ ಕರೋನಾ ನಂತರದ ಬೆಳವಣಿಗೆಗೆ ಹೋಲಿಸಿ ಆರ್ಥಿಕ ಬಿಕ್ಕಟ್ಟು ಸುಧಾರಿಸಿದೆ ಎಂದು ಹೇಳಲಾಗುತ್ತಿದೆ ಎಂದು ದೂರಿದರು.
ಆರ್ಥಿಕ ಬಿಕ್ಕಟ್ಟು ಸುಧಾರಿಸಿದ್ದರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕನ್ನು ಏಕೆ ಕಸಿಯಲಾಗುತ್ತಿದೆ. ೫ ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಭಾರತದಲ್ಲಿ ೪೨.೩% ನಿರುದ್ಯೋಗ ಏಕೆ? ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಪ್ರತಿಪಾದನೆ ಮಾಡುವ ಸರ್ಕಾರ ೧೦೦ಕ್ಕೆ ೬೦% ಗುತ್ತಿಗೆ-ಹೊರಗುತ್ತಿಗೆಯ ಹುದ್ದೆಗಳನ್ನು ಏಕೆ ಸೃಷ್ಟಿಸುತ್ತಿದೆ? ಸರ್ಕಾರದ ಇಂತಹ ಆರ್ಥಿಕ ನೀತಿಗಳಿಂದ ಬಡವರ ಭಾರತ ಮತ್ತು ಶ್ರೀಮಂತರ ಭಾರತವನ್ನು ಸೃಷ್ಟಿಸಿ ದೊಡ್ಡ ಪ್ರಮಾಣದ ಆರ್ಥಿಕ ಅಸಮಾನತೆಯ ಕಂದಕವನ್ನು ಸೃಷ್ಟಿಸಿರುವುದು ’ಸಬ್‌ಕಾ ವಿಕಾಸ್’ ಎನ್ನುವ ಘೋಷಣೆಯಾಗಿದೆ ಎಂದು ಹೇಳಿದರು.ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂದರೆ ಸಾರ್ವಜನಿಕ ಒಡೆತನವನ್ನು ಖಾಸಗಿ ವೈಕ್ತಿಗಳಿಗೆ ಅಡಮಾನ ಇಡುವುದೇ? ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ರೈತನನ್ನು ಬಲಿ ತೆಗೆದುಕೊಳ್ಳುವ ನೀತಿ ಸರಿಯೇ?ಯೆಂದು ಪ್ರಶ್ನಿಸಿದರು.
ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ದೇಶದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ಚಳುವಳಿ ನಡೆಸುತ್ತಿದ್ದಾರೆ. ಇಂತಹ ಚಳವಳಿಗಳ ಮೇಲೆ ದೆಹಲಿಯಲ್ಲಿ ಪೊಲೀಸ್ ದಬ್ಬಾಳಿಕೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು.ಸಿಐಟಿಯು ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಕೆಪಿಆರ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಇದ್ದರು.