ಸಾರಾಂಶ
ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿ ನಂತರ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಿದಲ್ಲಿ ಮಾತ್ರ ಪಟ್ಟಣ ಅಪರಾಧ ಮುಕ್ತವಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಿದಲ್ಲಿ ಮಾತ್ರ ಪಟ್ಟಣ ಅಪರಾಧ ಮುಕ್ತವಾಗಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿ ನಂತರ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಗಾಲೋಟದ ಅಭಿವೃದ್ಧಿಯ ನಡುವೆ ಕಳ್ಳತನ, ವಂಚನೆ, ಸುಲಿಗೆ ಮತ್ತಿತರ ಪ್ರಕರಣಗಳು ನಡೆಯುತ್ತವೆ. ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದು ಪೊಲೀಸ್ ಸಿಬ್ಬಂದಿ ಕೊರತೆಯ ನಡುವೆ ಪ್ರಕರಣಗಳು ಸಂಭವಿಸುತ್ತವೆ. ನಾಗರಿಕರ ಸಹಾಯ ಮೂಲಕ ಅತೀ ಶೀಘ್ರದಲ್ಲಿ ಅಪರಾಧಿಗಳ ಪತ್ತೆ ಸಾಧ್ಯ ಎಂದು ಕುಶಾಲನಗರದಲ್ಲಿ ನಡೆದ ಕೆಲವು ಪ್ರಕರಣಗಳ ಬಗ್ಗೆ ವ್ಯಾಖ್ಯಾನಿಸಿ ಅವರು ಹೇಳಿದರು. ತಮ್ಮ ಸುತ್ತಮುತ್ತ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಅವರು ಕೋರಿದರು.ಕುಶಾಲನಗರ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ಸೋಮವಾರಪೇಟೆ ಉಪ ವಿಭಾಗದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಪರಾಧ ಮುಕ್ತ ಸಮಾಜದ ಬಗ್ಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆಯ ಮೂಲಕ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳನ್ನು ಪೊಲೀಸ್ ನೈಟ್ ಬೀಟ್ ಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದರು.
ವಾಹನ ಸವಾರರು ಯಾವುದೇ ಸಂದರ್ಭ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಂತೆ ಅವರು ಕಿವಿಮಾತು ಹೇಳಿದರು.ಯಾವುದೇ ಸ್ಥಳಗಳಲ್ಲಿ ನಡೆಯುವ ಅಪರಾಧ, ವಂಚನೆ ಮತ್ತಿತರ ವಿಷಯಗಳ ಬಗ್ಗೆ ಪೊಲೀಸ್ ಇಲಾಖೆಗೆ ಕೂಡಲೇ ಮಾಹಿತಿ ನೀಡುವಂತಹ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ಮಾಹಿತಿ ನೀಡುವವರ ಬಗ್ಗೆ ಯಾವುದೇ ರೀತಿಯಲ್ಲಿ ಸುಳಿವು ಬಹಿರಂಗವಾಗದಂತೆ ಇಲಾಖೆ ಅಧಿಕಾರಿ ಸಿಬ್ಬಂದಿ ಗೌಪ್ಯ ಕಾಪಾಡುತ್ತಾರೆ. ನಾಗರಿಕರು ಯಾವುದೇ ಭಯ,ಅಳುಕಿಲ್ಲದೆ ಸಮಾಜಘಾತಕ ಶಕ್ತಿಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದರು.
ಕುಶಾಲನಗರ ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತು ಸ್ಥಳೀಯ ಪ್ರಮುಖರು ಇದ್ದರು.