ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿ, ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.3 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯಲಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ‘ವಿಧಾನಸೌಧ ಚಲೋ’ ಅಂಗವಾಗಿ ಮಡಿಕೇರಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ವತಿಯಿಂದ ಪ್ರಚಾರ ಆಂದೋಲನ ನಡೆಯಿತು.ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಸಿಐಟಿಯು ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು, ಕಾರ್ಮಿಕರ ಪರವಾದ ಕಾನೂನುಗಳನ್ನು ಜಾರಿ ಮಾಡಬೇಕು, ಬೆಲೆ ಏರಿಕೆಯ ಸೂಚ್ಯಾಂಕದಲ್ಲಿ ಹೆಚ್ಚಳವಾಗುವ ಪ್ರತಿ ಅಂಶಕ್ಕೂ ಪ್ರತಿದಿನಕ್ಕೆ 6 ಪೈಸೆ ತುಟ್ಟಿಭತ್ಯೆ ಯೊಂದಿಗೆ ಸಮಾನ ಕನಿಷ್ಟ ವೇತನ ಪರಿಷ್ಕರಿಸಿ ಜಾರಿ ಮಾಡಬೇಕು, ಪ್ರತಿ ಕುಶಲತೆಗೆ ಶೇ.15 ರಷ್ಟು ಹೆಚ್ಚಳ ನೀಡಬೇಕು. ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು, ವಿದ್ಯುಚ್ಛಕ್ತಿ ಖಾಸಗೀಕರಣ ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ತಿರಸ್ಕರಿಸಬೇಕು, ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿಭತ್ಯೆಯೊಂದಿಗೆ ಎಲ್ಲಾ ವಿಭಾಗಗಳಲ್ಲಿನ ಕುಶಲ ಕಾರ್ಮಿಕರಿಗೆ ಸಮಾನ ಕನಿಷ್ಠ ವೇತನ 31,566 ರು. ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನೀಡುವುದರಲ್ಲಿ ಕೊರತೆಯಾಗಿರುವ 380 ಕೋಟಿ ರು. ಹಣವನ್ನು ಬಿಡುಗಡೆ ಮಾಡಲು ಬಜೆಟ್ ನಲ್ಲಿ ಅವಕಾಶ ಕಲ್ಪಿಸಬೇಕು. ಇ.ಎಫ್.ಎಂ.ಎಸ್ ಗೆ ಸೇರ್ಪಡೆಯಾಗದೆ ಉಳಿದಿರುವ ನೌಕರರನ್ನು ಸೇರಿಸಬೇಕು, ಕಸಗುಡಿಸುವವರಿಗೆ ಅನುಮೋದನೆ ನೀಡಬೇಕು ಮತ್ತು ಕನಿಷ್ಠ ವೇತನ ಪರಿಷ್ಕರಣೆ ಆಗಬೇಕು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಎಲ್ಲಾ ಮುನಿಸಿಪಲ್ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು, ಉಳಿದವರಿಗೆಲ್ಲ ಗುತ್ತಿಗೆ ರದ್ದು ಮಾಡಿ ನೇರ ಪಾವತಿ ಅಡಿಯಲ್ಲಿ ಸಂಬಳ ಪಾವತಿ ಮಾಡಬೇಕು, ತೋಟ ಕಾರ್ಮಿಕರ ಕಾಯ್ದೆಯನ್ನು ಉಳಿಸಿ ಪ್ಲಾಂಟೇಶನ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಿ ಮನೆ, ಶಿಕ್ಷಣ, ಆರೋಗ್ಯ, ಸವಲತ್ತುಗಳನ್ನು ಜಾರಿ ಮಾಡಬೇಕು, ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಮಾದರಿಯಲ್ಲಿ ರಾಜ್ಯ ಕಾರ್ಮಿಕ ಸಮ್ಮೇಳನ ನಡೆಸಬೇಕು, ಸೇಲ್ಸ್ ಪ್ರಮೋಷನ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಕುರಿತು ಕಾನೂನುಗಳನ್ನು ಜಾರಿಗೊಳಿಸಬೇಕು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 200 ದಿನಗಳ ಕೆಲಸ ಹಾಗೂ ದಿನಕ್ಕೆ 700 ರು. ವೇತನದೊಂದಿಗೆ ನೀಡಬೇಕು, ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಿ ಜಾರಿ ಮಾಡಬೇಕು, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲನ್ನು ಪಡೆಯಲು ಕೂಡಲೇ ಕ್ರಮವಹಿಸಬೇಕು, ಎಲ್ಲಾ ಖಾಸಗಿ ನೌಕರರಿಗೂ ನಿವೃತ್ತಿ ವಯಸ್ಸು 60 ವರ್ಷ ಆಗಬೇಕೆಂಬ ತೀರ್ಮಾನ ಸಮರ್ಪಕವಾಗಿ ಜಾರಿಯಾಗಬೇಕು, ಕೊಡಗಿಗೆ ರೈಲು ತರುವ ಪ್ರಯತ್ನ ಆಗಬೇಕು, ಕಾಡು ಪ್ರಾಣಿಗಳ ಉಪಟಳದಿಂದ ಮನುಷ್ಯರ ಹತ್ಯೆಯನ್ನು ತಡೆಗಟ್ಟಲು ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕು, ಭೂಗುತ್ತಿಗೆ ಕಾಯ್ದೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು, ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶನ, ಭೂರಹಿತರಿಗೆ ಭೂಮಿಯನ್ನು ಹಂಚಬೇಕೆಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು, ಖಜಾಂಚಿ ಎನ್.ಡಿ.ಕುಟ್ಟಪ್ಪನ್, ಸದಸ್ಯ ಸಾಜಿ ರಮೇಶ್, ಬಿಸಿಯೂಟ ನೌಕರರ ಸಂಘದ ಸರಳಿ, ರಾಧ, ರೈತ ಸಂಘದ ನಾಯಕ ಟಿ.ಟಿ.ಉದಯ್ ಕುಮಾರ್, ಅಂಗನವಾಡಿ ನೌಕರರ ಸಂಘದ ಸರೋಜ, ಆಸ್ಪತ್ರೆ ನೌಕರರ ಸಂಘದ ಜಾನಕಿ, ಬೇಬಿ ಸೇರಿದಂತೆ ವಿವಿಧ ಸಂಘಟನೆಯ ಪ್ರಮುಖರು ಆಂದೋಲನದಲ್ಲಿ ಪಾಲ್ಗೊಂಡಿದ್ದರು.