ಸಾರಾಂಶ
ವಿಜಯಪುರ: ಯಲಿಯೂರು ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದೆ, ಹಿಡುವಳಿ ಜಮೀನುಗಳಲ್ಲಿ ಓಡಾಡಬೇಕಿದೆ. ಈ ಬಗ್ಗೆ ಕಂದಾಯ ಇಲಾಖೆ ಸಚಿವ ಕೃಷ್ಷಬೈರೇಗೌಡ, ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸೋಮವಾರ ಚನ್ನರಾಯಪಟ್ಟಣ ನಾಡಕಚೇರಿ ಮುಂದೆ ಯಲಿಯೂರು ಗ್ರಾಮಸ್ಥರು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಸಂಘದ ಸಹಯೋಗದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.ಗ್ರಾಮದ ಸ್ಮಶಾನಗಳಿಗೆ ದಾರಿಯಿಲ್ಲ, ಬೇಚಾರಕ್ ಗ್ರಾಮ ಕೊಮ್ಮಸಂದ್ರಕ್ಕೆ ಸೇರಿರುವ ಕುಂಟೆಯನ್ನು ಒತ್ತುವರಿ ಮಾಡಿಕೊಳ್ಳುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೇ ಕುಮ್ಮಕ್ಕು ನೀಡಿದ್ದಾರೆ. ಕುಂಟೆಯ ಜಾಗವನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಅವರು ಈಗ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ನಾವು ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಆನಂದ್ ಮಾತನಾಡಿ, ಯಲಿಯೂರು ಗ್ರಾಪಂ ಲೆಕ್ಕಾಧಿಕಾರಿಯನ್ನು ವರ್ಷಗಳೇ ಉರುಳಿದರು ಯಾರು ಆತನ ಮುಖವನ್ನೇ ನೋಡಿಲ್ಲ. ಹೀಗಿದ್ದಾಗ ಗ್ರಾಮಸ್ಥರ ಸಮಸ್ಯೆ ಕೇಳುವವರಾರು ಎಂದು ಪ್ರಶ್ನಿಸಿದರು.ರೈತರಾದ ತ್ಯಾಗರಾಜು, ರೈತ ವೇಣುಗೋಪಾಲ್ ಮಾತನಾಡಿ, ಯಲಿಯೂರು ಪೋಡಿ ಮುಕ್ತ ಗ್ರಾಮವೆಂದು ಘೋಷಣೆಯಾಗಿದ್ದರೂ ಇನ್ನು ಹಲವಾರು ಜಮೀನುಗಳು ಪೋಡಿ ಆಗದೆ ಉಳಿದುಕೊಂಡಿದ್ದು ಕೂಡಲೇ ಅವುಗಳನ್ನು ಪೋಡಿ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಾಡ ಕಚೇರಿ ಉಪ ತಹಸೀಲ್ದಾರ್ ಸುರೇಶ್ ಮಾತನಾಡಿ, ಸ್ಮಶಾನಕ್ಕೆ ಹೋಗುವ ಜಾಗಕ್ಕೆ ರೈತರೊಬ್ಬರು ಅಡ್ಡಿ ಮಾಡುತ್ತಿದ್ದು ಕೂಡಲೇ ತಹಸೀಲ್ದಾರ್ ಬಳಿಗೆ ಹೋಗಿ ಇದರ ಬಗ್ಗೆ ತೀರ್ಮಾನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ನಿಮ್ಮೆಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿದರು.ಯಲಿಯೂರು ಗ್ರಾಪಂ ಸದಸ್ಯೆ ಲಕ್ಷ್ಮಮ್ಮ, ಮುಖಂಡ ಚಿಕ್ಕಣ್ಣ, ಮುನಿರಾಜು, ರಾಮಕೃಷ್ಣ, ಆಂಜಿನಪ್ಪ, ನಾಗರಾಜ್, ತಿಮ್ಮರಾಯಪ್ಪ, ಮಟ್ಟಬಾರ್ಲು ಆಂಜಿನಪ್ಪ, ಚನ್ನಕೃಷ್ಣ, ವಿಜಯ ಕುಮಾರ್, ಕೆಂಪೇಗೌಡ, ಪಿಳ್ಳಣ್ಣ, ಆಂಜಿನೇಯಗೌಡ, ವೇಣುಗೋಪಾಲ್ ಇತರರಿದ್ದರು.
(ಫೋಟೋ ಕ್ಯಾಪ್ಷನ್)ವಿಜಯಪುರ ಸಮೀಪದ ಚನ್ನರಾಯಪಟ್ಟಣ ನಾಡ ಕಚೇರಿ ಮುಂದೆ ಯಲಿಯೂರು ಗ್ರಾಮದ ರೈತರಿಂದ ಉಪ ತಹಸೀಲ್ದಾರ್ ಸುರೇಶ್ ಮನವಿ ಸ್ವೀಕರಿಸಿದರು.