ಮಾಸಿಕ ಸರಾಸರಿ 36 ಸಾವಿರ ರು. ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿಗಳಿಗಾಗಿ ಹಾಗೂ ಕಾಯಮೇತರ ಕಾರ್ಮಿಕರ ಕಾಯಂಗೆ ಶಾಸನ ರೂಪಿಸಲು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (ಸಿಐಟಿಯು) ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

- ಕೇಂದ್ರದ 4 ಕಾರ್ಮಿಕ ಸಂಹಿತೆ ಯಥಾವತ್ ಜಾರಿಗೆ ತರದಂತೆ ರಾಜ್ಯಕ್ಕೆ ಕೆ.ಎಚ್.ಆನಂದರಾಜ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಸಿಕ ಸರಾಸರಿ ₹36 ಸಾವಿರ ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿಗಳಿಗಾಗಿ ಹಾಗೂ ಕಾಯಮೇತರ ಕಾರ್ಮಿಕರ ಕಾಯಂಗೆ ಶಾಸನ ರೂಪಿಸಲು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (ಸಿಐಟಿಯು) ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎಚ್. ಆನಂದರಾಜ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಡಳಿತದ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರಗಳನ್ನು ಅರ್ಪಿಸಿದರು.

ಕೆ.ಎಚ್.ಆನಂದರಾಜ ಮಾತನಾಡಿ, ಸರ್ಕಾರವು ವೈಜ್ಞಾನಿಕವಾಗಿ ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸಲಿ. ಕನಿಷ್ಠ ವೇತನ ಪರಿಷ್ಕರಿಸಿ, ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಟ ವೇತನ ನಿಗದಿಪಡಿಸದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ 4 ವಲಯಕ್ಕೆ ಬದಲಾಗಿ 3 ವಲಯಗಳಾಗಿ ಮಾಡಿ ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸ್ವಾಗತಿಸುತ್ತೇವೆ. ಆದರೆ, ಅವುಗಳಲ್ಲಿನ ನ್ಯೂನತೆಗಳನ್ನು ಮೊದಲು ಸರಿಪಡಿಸಲಿ ಎಂದರು.

ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಮತ್ತು ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ರೆಪ್ತಕೋಸ್ ಬ್ರೆಟ್ ಆಂಡ್ ಕಂ ಪ್ರಕರಣದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕು ಎಂಬುದು ಕರ್ನಾಟಕ ಹೈಕೋರ್ಟ್ ನಿರ್ದೇಶನ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಗಳ ಆಗ್ರಹವಾಗಿತ್ತು ಎಂಬುದನ್ನು ಸರ್ಕಾರ ಮರೆಯಬಾರದು. ಕನಿಷ್ಠ ವೇತನದಿಂದ ₹1 ಕೋಟಿಗೂ ಅಧಿಕ ಕಾರ್ಮಿಕರಿಗೆ ಪ್ರಯೋಜನ ಆಗಲಿದೆ ಎಂಬುದನ್ನು ಮನಗಾಣುತ್ತಲೇ ಹೆಚ್ಚಿಸಿದ ಕನಿಷ್ಠ ವೇತನ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ ಎಂದು ದೂರಿದರು.

ಈಗಿನ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಸರಾಸರಿ ₹36 ಸಾವಿರ ಕನಿಷ್ಠ ವೇತನ ನಿಗದಿಪಡಿಸಲಿ. ಕನಿಷ್ಠ ವೇ ತನದ ಕರಡು ಅಧಿಸೂಚನೆ ಹೊರಡಿಸಿದ 11.4.2025ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ಬದಲಾಗಿ 22.5.2026ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಜಾರಿಗೆ ತಂದಿರುವುದು ಬಹುಸಂಖ್ಯಾತ ಕಾರ್ಮಿಕರಿಗೆ ಒಂದು ವರ್ಗದ ಅರಿಯರ್ಸ್ ಸಿಗದಂತೆ ಮಾಡಿದೆ. ಹಾಗಾಗಿ ಕನಿಷ್ಠ ವೇತನವನ್ನು ಏಪ್ರಿಲ್ 2025ರಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು ಎಂದು ತಾಕೀತು ಮಾಡಿದರು.

ಅಧಿಸೂಚನೆಯಿಂದ ಗಾಮೆಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿ 19 ವಿಭಾಗದ ಉದ್ದಿಮೆ ಹೊರಗಿಟ್ಟ ಸರ್ಕಾರದ ಕ್ರಮದಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗಲಿದ್ದಾರೆ. ಮೇ 22ರಂದು ಜಾರಿಗೆ ತಂದ ಕನಿಷ್ಠ ವೇತನವನ್ನೇ ಈ 19 ಉದ್ದಿಮೆಗೂ ವಿಸ್ತರಿಸಿ, ತಕ್ಷಣ ಅಧಿಸೂಚನೆ ಹೊರಡಿಸಬೇಕು. ಸ್ಕೀಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು. ಪ್ರಸ್ತುತ ಪ್ರಕಟಿತ ಕನಿಷ್ಠ ವೇತನದಿಂದ ಕಾರ್ಮಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ವೇತನ ಹೆಚ್ಚಿಸಿರುವುದರಿಂದ ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೇ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರ ಪರ ತಿದ್ದುಪಡಿಗಳನ್ನು ಮಾಡಿ ನಿಯಮಗಳನ್ನು ರೂಪಿಸಬೇಕು. ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನನ್ನು ರದ್ದುಪಡಿಸಿ ಮಾಡಿರುವ 4 ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ನಿಯಮ ರೂಪಿಸಿ ಮೇ 8ರಿಂದ ಜಾರಿಗೊಳಿಸಿದೆ. ಇದರಿಂದ ಕಾರ್ಮಿಕ ವರ್ಗ ಸ್ವಾತಂತ್ಯ ಪೂರ್ವದಿಂದಲೂ ಹೋರಾಟಗಳಿಂದ ಪಡೆದ ಮೂಲಭೂತ ಹಕ್ಕು ಮೊಟಕುಗೊಳ್ಳಲಿವೆ. ಶ್ರಮದ ಶೋಷಣೆ ಹೆಚ್ಚಾಗಲಿದೆ. ರಾಜ್ಯದ ಕೈಗಾರಿಕಾ ಸಂಬಂಧಕ್ಕೆ ಧಕ್ಕೆಯಾಗಲಿದೆ. ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಲಿದೆ. ಕಾರ್ಮಿಕರನ್ನು ನವ ಗುಲಾಮಗಿರಿಗೆ ದೂಡುವ ಕೇಂದ್ರದ 4 ಸಂಹಿತೆಗಳನ್ನು ಯಥಾವತ್ತಾಗಿ ರಾಜ್ಯದಲ್ಲಿ ಜಾರಿಗೆ ತರಬಾರದು. ದೇಶದ ಸಂವಿಧಾನ ನೀಡಿದ ಪ್ರದತ್ತ ಅಧಿಕಾರ ಬಳಸಿ ರಾಜ್ಯ ಸರ್ಕಾರ ಈ 4 ಸಂಹಿತೆಗೆ ಕಾರ್ಮಿಕರ ಪರ ಕರ್ನಾಟಕ ತಿದ್ದುಪಡಿ ತರಬೇಕು, ನಂತರ ನಿಯಮ ರೂಪಿಸಬೇಕು ಎಂದು ಆನಂದರಾಜ ಆಗ್ರಹಿಸಿದರು.

ಸಂಘಟನೆ ಮುಖಂಡರಾದ ಮುದಿಮಲ್ಲನ ಗೌಡ, ಅಫ್ರೋಜ್ ಅಹಮ್ಮದ್‌, ಎಸ್.ಸಿ. ಶ್ರೀನಿವಾಸಾಚಾರ್‌, ಬಿ.ಎನ್‌. ಹಾಲೇಶ ನಾಯ್ಕ, ಜಿ.ಡಿ. ಮಂಜುನಾಥ ಸೇರಿದಂತೆ ಕೆಎಸ್‌ಎಂ ಅಂಡ್ ಎಸ್ಆರ್‌ಎ, ಗ್ರಾಪಂ ನೌಕರರ ಸಂಘ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರತಿನಿಧಿಗಳು, ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.

- - -

(ಕೋಟ್‌) ಸರ್ಕಾರಿ, ಖಾಸಗಿ ವಲಯದಲ್ಲಿ ಹಂಗಾಮಿ, ಗುತ್ತಿಗೆ, ನಿಯಮಿತ ಅವಧಿ, ಟ್ರೈನಿ, ಇನ್ನಿತರ ಸ್ವರೂಪದ ಕಾಯಂಯೇತರ ಕಾರ್ಮಿಕರು ಕಡಿಮೆ ವೇತನಕ್ಕೆ, ಯಾವುದೇ ಕಾನೂನುಬದ್ಧ ಸವಲತ್ತುಗಳಿಲ್ಲದೇ ಅಭದ್ರತೆಯಲ್ಲಿ ದುಡಿಯುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆ ರಾಜ್ಯದಲ್ಲಿ ಗುತ್ತಿಗೆ ಪದ್ಧತಿ ನಿಯಂತ್ರಿಸಿ ಕಾಯಂಯೇತರರ ಕಾಯಂಗೆ ಶಾಸನ ರೂಪಿಸಲು ಕರಡು ಸಿದ್ಧಪಡಿಸಿತ್ತು. ಪ್ರಸ್ತುತ ಸರ್ಕಾರದಡಿ ಸೊಸೈಟಿ ಮಾದರಿ ಕೈಬಿಟ್ಟು ರಾಜ್ಯದಲ್ಲಿ ಕಾಯಂಯೇತರ ಕಾಯಂಗೆ ಶಾಸನ ರೂಪಿಸಬೇಕು.

- ಕೆ.ಎಚ್. ಆನಂದರಾಜ, ರಾಜ್ಯ ಕಾರ್ಯದರ್ಶಿ, ಸಿಐಟಿಯು.

- - -

-30ಕೆಡಿವಿಜಿ3, 4: ದಾವಣಗೆರೆ ಜಿಲ್ಲಾಡಳಿತ ಭವನದ ಎದುರು ಶನಿವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.