ಕನಿಷ್ಠ ವೇತನ ಪರಿಷ್ಕರಣೆಯ ಜಾರಿಯ ದಿನಾಂಕದ ಕುರಿತು ಸಿಐಟಿಯು ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಕರಡು ಅಧಿಸೂಚನೆಯನ್ನು 2025ರ ಏಪ್ರಿಲ್ 11ರಂದು ಪ್ರಕಟಿಸಿದ್ದರೂ, ಅಂತಿಮ ಅಧಿಸೂಚನೆಯನ್ನು 2026ರ ಮೇ 22ರಿಂದ ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರು ಸುಮಾರು ಒಂದು ವರ್ಷದ ಅವಧಿಯ ಬಾಕಿ ವೇತನದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಷ್ಕ್ರತ ವೇತನವನ್ನು 2025ರ ಏಪ್ರಿಲ್ 11ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತಂದು ಕಾರ್ಮಿಕರಿಗೆ ದೊರೆಯಬೇಕಾದ ವೇತನ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿನ ಎಲ್ಲಾ ಕಾರ್ಮಿಕರಿಗೆ ಜೀವನ ನಿರ್ವಹಣೆಗೆ ಅಗತ್ಯವಾದ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಮಾಸಿಕ ಸರಾಸರಿ 36 ಸಾವಿರ ರುಪಾಯಿ ಕನಿಷ್ಠ ವೇತನ ನಿಗದಿಪಡಿಸಬೇಕು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾದ ತಿದ್ದುಪಡಿಗಳನ್ನು ಕರ್ನಾಟಕ ಸರ್ಕಾರ ತರಬೇಕು ಹಾಗೂ ಗುತ್ತಿಗೆ, ಹಂಗಾಮಿ ಮತ್ತು ಇತರ ಖಾಯಂಯೇತರ ಕಾರ್ಮಿಕರನ್ನು ಖಾಯಂಗೊಳಿಸಲು ಪ್ರತ್ಯೇಕ ಶಾಸನ ರೂಪಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮದ ಭಾಗವಾಗಿ ಈ ಮನವಿ ಸಲ್ಲಿಸಲಾಗಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಜೀವನಮಟ್ಟ ಸುಧಾರಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ವಿವಿಧ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ವೇತನ ನಿಗದಿಪಡಿಸುವ ಬದಲು ಬಹುತೇಕ ಉದ್ದಿಮೆಗಳಿಗೆ ಏಕರೂಪದ ವೇತನ ವ್ಯವಸ್ಥೆ ಜಾರಿಗೊಳಿಸಿರುವುದು ಹಾಗೂ ಹಿಂದಿನ ನಾಲ್ಕು ವಲಯಗಳ ಬದಲಿಗೆ ಮೂರು ವಲಯಗಳ ವ್ಯವಸ್ಥೆ ಅಳವಡಿಸಿರುವುದು ಕಾರ್ಮಿಕರ ಪರವಾದ ಹೆಜ್ಜೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ ಎಂದರು. ಆದಾಗ್ಯೂ, ಪ್ರಸ್ತುತ ನಿಗದಿಪಡಿಸಿರುವ ವೇತನವು ಕಾರ್ಮಿಕರ ನೈಜ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿಲ್ಲ ಎಂದು ಸಂಘಟನೆ ಹೇಳಿದೆ. ಸುಪ್ರೀಂ ಕೋರ್ಟ್ 1992ರ `ವರ್ಕ್ಮೆನ್ ವರ್ಸಸ್ ರೆಪ್ಟಾಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಕಾರ್ಮಿಕ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಇತರೆ ಮೂಲಭೂತ ಅಗತ್ಯಗಳನ್ನು ಪರಿಗಣಿಸಿ ವೇತನ ನಿಗದಿಪಡಿಸಬೇಕಾಗಿದೆ. ಇದೇ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ಕರ್ನಾಟಕ ಹೈಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಆದರೆ ಸರ್ಕಾರದ ಇತ್ತೀಚಿನ ಅಧಿಸೂಚನೆ ಈ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಗುಣವಾಗಿಲ್ಲ ಎಂದು ಆರೋಪಿಸಿದರು. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ, ದಿನನಿತ್ಯದ ಜೀವನ ವೆಚ್ಚ ಮತ್ತು ಕುಟುಂಬ ನಿರ್ವಹಣೆಯ ವಾಸ್ತವಿಕ ಅಗತ್ಯಗಳನ್ನು ಪರಿಗಣಿಸಿದರೆ ಕನಿಷ್ಠ ವೇತನವು ಸರಾಸರಿ 36 ಸಾವಿರ ರು. ಇರಬೇಕು. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕಾರ್ಮಿಕರಿಗೆ ಪರಿಷ್ಕೃತ ವೇತನದಿಂದ ಪ್ರಯೋಜನವಾಗಲಿದೆಯಾದರೂ, ನೈಜ ಜೀವನ ವೆಚ್ಚಕ್ಕೆ ತಕ್ಕಂತೆ ಮತ್ತಷ್ಟು ಹೆಚ್ಚಳ ಅಗತ್ಯವಿದೆ ಎಂದು ಹೇಳಿದರು.
ಕನಿಷ್ಠ ವೇತನ ಪರಿಷ್ಕರಣೆಯ ಜಾರಿಯ ದಿನಾಂಕದ ಕುರಿತು ಸಿಐಟಿಯು ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಕರಡು ಅಧಿಸೂಚನೆಯನ್ನು 2025ರ ಏಪ್ರಿಲ್ 11ರಂದು ಪ್ರಕಟಿಸಿದ್ದರೂ, ಅಂತಿಮ ಅಧಿಸೂಚನೆಯನ್ನು 2026ರ ಮೇ 22ರಿಂದ ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರು ಸುಮಾರು ಒಂದು ವರ್ಷದ ಅವಧಿಯ ಬಾಕಿ ವೇತನದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಷ್ಕ್ರತ ವೇತನವನ್ನು 2025ರ ಏಪ್ರಿಲ್ 11ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತಂದು ಕಾರ್ಮಿಕರಿಗೆ ದೊರೆಯಬೇಕಾದ ವೇತನ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ 26 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವುದರ ಬಗ್ಗೆಯೂ ಸಂಘಟನೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಸಂಹಿತೆಗಳು ಕಾರ್ಮಿಕರು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಹೋರಾಟಗಳ ಮೂಲಕ ಪಡೆದಿರುವ ಅನೇಕ ಹಕ್ಕುಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಕೆಲಸದ ಭದ್ರತೆ ಕಡಿಮೆಯಾಗುವುದು, ಕಾರ್ಮಿಕ ಸಂಘಟನೆಗಳ ಹಕ್ಕುಗಳಿಗೆ ಧಕ್ಕೆಯಾಗುವುದು ಹಾಗೂ ಶ್ರಮದ ಶೋಷಣೆ ಹೆಚ್ಚಾಗುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.ಹೀಗಾಗಿ ಕೇಂದ್ರದ ಸಂಹಿತೆಗಳನ್ನು ಯಥಾವತ್ತಾಗಿ ಜಾರಿಗೊಳಿಸದೆ, ರಾಜ್ಯ ಸರ್ಕಾರ ಸಂವಿಧಾನ ನೀಡಿರುವ ಅಧಿಕಾರ ಬಳಸಿಕೊಂಡು ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವ ರೀತಿಯಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ತಿದ್ದುಪಡಿಗಳನ್ನು ತರಬೇಕು. ನಂತರವೇ ರಾಜ್ಯ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಲಕ್ಷಾಂತರ ಕಾರ್ಮಿಕರು ಗುತ್ತಿಗೆ, ಹಂಗಾಮಿ, ಔಟ್ ಸೋರ್ಸಿಂಗ್, ನಿಯಮಿತ ಅವಧಿ, ತರಬೇತಿ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಖಾಯಂ ನೌಕರರಿಗೆ ದೊರೆಯುವ ವೇತನ, ಭತ್ಯೆ, ಸಾಮಾಜಿಕ ಭದ್ರತೆ ಹಾಗೂ ಕಾನೂನುಬದ್ಧ ಸೌಲಭ್ಯಗಳು ದೊರೆಯುತ್ತಿಲ್ಲ. ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದರೂ ಉದ್ಯೋಗ ಭದ್ರತೆ ಇಲ್ಲದ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದುಮನವಿ ಪತ್ರದಲ್ಲಿ ವಿವರಿಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಗುತ್ತಿಗೆ ಪದ್ಧತಿಯನ್ನು ನಿಯಂತ್ರಿಸುವ ಹಾಗೂ ಖಾಯಂಯೇತರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರತ್ಯೇಕ ಕಾನೂನು ರೂಪಿಸಬೇಕು. ಈ ಹಿಂದೆ ಕಾರ್ಮಿಕ ಇಲಾಖೆ ಈ ಸಂಬಂಧ ಕರಡು ಮಸೂದೆ ಸಿದ್ಧಪಡಿಸಿದ್ದರೂ ಅದು ಜಾರಿಗೆ ಬಂದಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಸೊಸೈಟಿ ಮಾದರಿಯ ವ್ಯವಸ್ಥೆಯನ್ನು ಕೈಬಿಟ್ಟು ಕಾರ್ಮಿಕರಿಗೆ ನೇರ ಉದ್ಯೋಗ ಭದ್ರತೆ ಒದಗಿಸುವ ಶಾಸನ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಖಜಾಂಚಿ ಅರವಿಂದ, ಪ್ರಧಾನ ಕಾರ್ಯದರ್ಶಿ ಮಂಜುಳ, ಕೆ.ಟಿ. ಹೊನ್ನೇಗೌಡ, ಸೌಮ್ಯ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.